ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಸರಿಯಾಗಿ ಒಂದು ವಾರ ಮಾತ್ರ ಬಾಕಿಯಿದೆ. ಈ ಸಮಯದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವ ಪ್ರಸ್ತಾಪ ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಕಾಂಗ್ರೆಸ್ನ ಈ ನಡೆಗೆ ಬಿಜೆಪಿ ಸೇರಿ ಹಿಂದೂ ಸಂಘಟನೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆ ಕಾಂಗ್ರೆಸ್ಗೆ ಠಕ್ಕರ್ ಕೊಡಲು ಬಜರಂಗದಳ ಮತ್ತು ಹಿಂದೂ ಸಂಘಟನೆಗಳು ಮುಂದಾಗಿವೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪ ವಿರೋಧಿಸಿ ಇಂದು ರಾಜ್ಯದ ಎಲ್ಲ ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ ಪಠಣವನ್ನು ಬಜರಂಗದಳ ಆಯೋಜಿಸಿದೆ. ಇಂದು ಸಂಜೆ 7 ಗಂಟೆಗೆ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ನಡೆಯಲಿದ್ದು, ಈ ಮೂಲಕ ಕಾಂಗ್ರೆಸ್ಗೆ ತಿರುಗೇಟು ನೀಡಲು ವಿವಿಧ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಮುಂದಾಗಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಪೋಸ್ಟ್ ಒಂದನ್ನು ಪ್ರಕಟಿಸಿದ್ದಾರೆ. ಬಜರಂಗದಳ ಇಂದು ಸಂಜೆ 7 ಗಂಟೆಗೆ ರಾಜ್ಯದಾದ್ಯಂತ ಸಾಮೂಹಿಕ ಹನುಮಾನ್ ಚಾಲಿಸಾ ಪಠಣವನ್ನು ಆಯೋಜಿಸಿದೆ. ಇದು ಧರ್ಮಕ್ಕೆ ಸಂಕಟವೆರಗಿರುವ ಸಮಯ. ಒಟ್ಟಾಗಿ ನಿಲ್ಲುವುದೊಂದೇ ಪರಿಹಾರ. ನಮ್ಮೆಲ್ಲ ಭೇದಗಳನ್ನು ಒತ್ತಟ್ಟಿಗಿಟ್ಟು ಧರ್ಮ ರಕ್ಷಣೆಗೆ ಜೊತೆಯಾಗೋಣ, ಕೈ ಜೋಡಿಸೋಣ ಎಂದು ಬರೆದುಕೊಂಡಿದ್ದಾರೆ. ಅದಲ್ಲದೇ ಬಜರಂಗದಳ ಬ್ಯಾನ್ ಮಾಡ್ತೀರಾ ಎಂದು ಪ್ರಶ್ನೆಯನ್ನು ಕೂಡ ಕೇಳಿದ್ದಾರೆ.