ವೇಗವಾಗಿ ಚಲಿಸುತ್ತಿದ್ದ ಬಸ್ ಪಲ್ಟಿಯಾಗಿ ಕಂದಕಕ್ಕೆ ಬಿದ್ದ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 28 ಜನರು ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ನಡೆದಿದೆ.
ಅಪಘಾತದಲ್ಲಿ ಕನಿಷ್ಠ 28 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದು, ಸುಮಾರು 22 ಜನರಿಗೆ ಗಾಯಗಳಾಗಿದ್ದು, ಅವರನ್ನು ಬಾಸಿಮಾದ ಸಿವಿಲ್ ಆಸ್ಪತ್ರೆಗೆ ಕಳುಹಿಸಲಾಗಿದೆ.ಟರ್ಬತ್ನಿಂದ ಕ್ವೆಟ್ಟಾಗೆ ತೆರಳುತ್ತಿದ್ದ ಬಸ್ ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದಿಂದ ಸುಮಾರು 700 ಕಿಲೋಮೀಟರ್ ದೂರದಲ್ಲಿರುವ ವಾಶುಕ್ ಪಟ್ಟಣದ ಸಮೀಪ ಕಂದಕಕ್ಕೆ ಬಿದ್ದ ಪರಿಣಾಮ ಈ ಘೋರ ದುರಂತ ಸಂಭವಿಸಿದೆ.
ಸಾವನ್ನಪ್ಪಿದವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಪ್ರಯಾಣಿಕರ ಬಸ್ನ ಟೈರ್ ಒಡೆದ ನಂತರ ಈ ಅಪಘಾತ ಸಂಭವಿಸಿದೆ ಎಂದು ರಕ್ಷಣಾ ಅಧಿಕಾರಿಗಳನ್ನು ಉಲ್ಲೇಖಿಸಿ ಜಿಯೋ ನ್ಯೂಸ್ ವರದಿ ಮಾಡಿದೆ.
ಅಪಘಾತಕ್ಕೆ ಚಾಲಕನ ಅತಿಯಾದ ವೇಗವೇ ಪ್ರಮುಖ ಕಾರಣ ಎಂದು ಪ್ರಾಥಮಿಕ ತನಿಖಾ ಮೂಲಗಳು ತಿಳಿಸಿವೆ. ಸಂಚಾರ ನಿಯಮಗಳು ಮತ್ತು ಸುರಕ್ಷತಾ ಮಾನದಂಡಗಳನ್ನು ಅಷ್ಟೇನೂ ಅನುಸರಿಸದ ಪಾಕಿಸ್ತಾನದಲ್ಲಿ ರಸ್ತೆ ಅಪಘಾತಗಳು ಸಾಮಾನ್ಯವಾಗಿದೆ.
ಮೇ 18 ರಂದು, ಪಂಜಾಬ್ನ ಖುಶಾಬ್ ಜಿಲ್ಲೆಯಲ್ಲಿ ಟ್ರಕ್ ಕಂದಕಕ್ಕೆ ಉರುಳಿ ಒಂದೇ ಕುಟುಂಬದ ಕನಿಷ್ಠ 13 ಜನರು ಸಾವನ್ನಪ್ಪಿದರು ಮತ್ತು ಒಂಬತ್ತು ಮಂದಿ ಗಾಯಗೊಂಡಿದ್ದರು. ಮೇ 3 ರಂದು, ಗಿಲ್ಗಿಟ್ ಬಾಲ್ಟಿಸ್ತಾನ್ನಲ್ಲಿ ಪ್ರಯಾಣಿಕ ಬಸ್ ಕಿರಿದಾದ ಪರ್ವತ ರಸ್ತೆಯಿಂದ ಪಲ್ಟಿಯಾಗಿ ಕಂದಕಕ್ಕೆ ಬಿದ್ದ ನಂತರ ಕನಿಷ್ಠ 20 ಜನರು ಪ್ರಾಣ ಕಳೆದುಕೊಂಡು 21 ಮಂದಿ ಗಾಯಗೊಂಡಿದ್ದರು.