ತಮಿಳು ಚಿತ್ರರಂಗದ ನಿರ್ಮಾಪಕರ ಸಂಘ ಮಾಡಿರುವ ನಿರ್ಧಾರದಿಂದ ಚಿತ್ರರಂಗದಲ್ಲಿ ಭಿನ್ನಭಿಪ್ರಾಯ ಮೂಡಿದೆ. ಕಳೆದ ಕೆಲ ದಿನಗಳ ಹಿಂದೆ ಸಭೆ ನಡೆಸಿದ ನಿರ್ಮಾಪಕ, ವಿತರಕರ ಸಂಘ ನಟ ಧನುಶ್, ವಿಶಾಲ್ ಅವರುಗಳ ವಿರುದ್ಧ ನಿಷೇಧ ಹೇರಿತ್ತು, ಬೇಡಿಕೆಗಳಿಗೆ ಒತ್ತಾಯಿಸಿ ನವೆಂಬರ್ 1 ರಿಂದ ಚಿತ್ರೀಕರಣ ಬಂದ್ ಮಾಡುವ ನಿರ್ಧಾರ ಪ್ರಕಟಿಸಿತ್ತು. ಧನುಶ್ ಹಾಗೂ ವಿಶಾಲ್ ಮೇಲೆ ನಿಷೇಧ ಹೇರಿರುವುದನ್ನು ತೀವ್ರವಾಗಿ ಖಂಡಿಸಿದ್ದ ಹಲವು ನಟರು. ನಿರ್ಧಾರ ವಾಪಸ್ ಪಡೆಯುವಂತೆ ಒತ್ತಾಯಿಸಿದ್ದರು. ನಿರ್ಮಾಪಕರ ಸಂಘ ಧನುಶ್ಗೆ ವಿರುದ್ಧವಾಗಿ ನಿಂತಿದ್ದರೆ ತಮಿಳು ಚಿತ್ರರಂಗದ ಕಲಾವಿದರ ಸಂಘ ಧನುಶ್ ಪರವಾಗಿ ನಿಂತಿದ್ದು, ಇದೀಗ ನಿರ್ಮಾಪಕರೊಟ್ಟಿಗೆ ಸಂಧಾನಕ್ಕೆ ಮುಂದಾಗಿದೆ.
ತಮಿಳು ಕಲಾವಿದರ ಸಂಘದ ಅಧ್ಯಕ್ಷ ನಾಸರ್ ಅವರ ಮುಂದಾಳತ್ವದಲ್ಲಿ ಕಲಾವಿದರ ಸಂಘವು ಧನುಶ್, ವಿಶಾಲ್ ಇನ್ನಿತರರ ಪರವಾಗಿ ತಮಿಳು ಚಿತ್ರರಂಗ ನಿರ್ಮಾಪಕ ಕೌನ್ಸಿಲ್ನ ಸದಸ್ಯರೊಟ್ಟಿಗೆ ಸಂಧಾನ ನಡೆಸಲಿದೆ. ಸಂಧಾನ ಸಭೆಗೂ ಮುನ್ನ ಆಂತರಿಕ ಸಭೆಯನ್ನು ನಡೆಸಲಾಗಿದ್ದು, ಸಭೆಯಲ್ಲಿ ಅಧ್ಯಕ್ಷ ನಾಸರ್ ಜೊತೆಗೆ ಉಪಾಧ್ಯಕ್ಷ ಪೂಚಿ ಮುರುಗನ್, ಖಜಾಂಚಿ ಕಾರ್ತಿ ಅವರುಗಳು ಸಹ ಇರಲಿದ್ದಾರೆ. ಇನ್ನು ಸಭೆಯಲ್ಲಿ ನೇರವಾಗಿ ಭಾಗವಹಿಸಲು ಸಾಧ್ಯವಾಗದ ಕಾರಣ ವಿಡಿಯೋ ಕಾನ್ಫರೆನ್ಸ್ ಮೂಲಕ ಗೌರವ ಕಾರ್ಯದರ್ಶಿ ವಿಶಾಲ್ ಸಹ ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆಯ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಾಸರ್, ‘ತಮಿಳು ನಿರ್ಮಾಪಕರ ಸಂಘ ವಿಧಿಸಿರುವ ನಿಯಮಗಳ ಬಗ್ಗೆ ನಾವು ಚರ್ಚಿಸಿದ್ದೇವೆ. ಅವರ ನಿರ್ಧಾರಗಳು ಒಪ್ಪುವಂಥಹವುಲ್ಲ. ಹಾಗಾಗಿ ನಾವು ನಿರ್ಮಾಪಕರ ಸಂಘದೊಟ್ಟಿಗೆ ಮಾತುಕತೆಯ ನಿರ್ಣಯ ಮಾಡಿದ್ದು, ಸಂಧಾನದ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಿದ್ದೇವೆ. ಈ ವಿಷಯವಾಗಿ ನಾವು ಮಾಧ್ಯಮಗಳ ಮುಂದೆ ಹೆಚ್ಚಿನ ಚರ್ಚೆಯನ್ನು ಮಾಡದಿರುವ ಬಗ್ಗೆ ನಿರ್ಧರಿಸಿದ್ದೇವೆ. ಆಂತರಿಕ ಸಮಸ್ಯೆಯನ್ನು ಆಂತರಿಕವಾಗಿಯೇ ಬಗೆಹರಿಸಿಕೊಳ್ಳಲಿದ್ದೇವೆ’ ಎಂದಿದ್ದಾರೆ.
‘ಚಿತ್ರರಂಗದಲ್ಲಿ ಎಲ್ಲವೂ ಸೌಹಾರ್ಧಯುತವಾಗಿರಲೆಂಬುದು ನಮ್ಮ ಬಯಕೆ ಆಗಿದೆ. ಪರಸ್ಪರ ಸ್ನೇಹ-ಸೌಹಾರ್ಧಯುತವಾಗಿಯೇ ಎಲ್ಲವೂ ಈವರೆಗೆ ನಡೆದುಕೊಂಡು ಬಂದಿದೆ. ಆದರೆ ಅವರು ಕೆಲವು ನಟರ ವಿರುದ್ಧ ದೂರುಗಳನ್ನು ಮಾಡಿದ್ದಾರೆ. ಅದು ಅವರ ಸ್ವಾತಂತ್ರ್ಯ, ಆದರೆ ಮಾತುಕತೆಯಿಂದ ಬಗೆಹರಿಸಲಾಗದ್ದು ಯಾವುದೂ ಇಲ್ಲ ಎಂಬುದು ನಮ್ಮ ನಂಬಿಕೆ. ಮುಂದಿನ ವಾರ ನಾವು ನಿರ್ಮಾಪಕರ ಸಂಘದೊಟ್ಟಿಗೆ ಸಭೆ ನಿಗದಿ ಪಡಿಸಿದ್ದೇವೆ’ ಎಂದಿದ್ದಾರೆ.
ಕೆಲ ದಿನಗಳ ಹಿಂದೆ ಸಭೆ ಸೇರಿದ್ದ ನಿರ್ಮಾಪಕ ಸಂಘದ ಸದಸ್ಯರು, ಸಿನಿಮಾಗಳ ನಿರ್ಮಾಣ ವೆಚ್ಚ ಹೆಚ್ಚಳವಾಗಿರುವುದು, ನಟರ ಸಂಭಾವನೆ ಹೆಚ್ಚಳ, ಅಡ್ವಾನ್ಸ್ ಪಡೆದು ಸಿನಿಮಾ ಪ್ರಾರಂಭ ಮಾಡದೇ ಇರುವುದು, ನಟರು ಡೇಟ್ಸ್ ನೀಡದೇ ಇರುವುದು ಇತ್ಯಾದಿ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯ ಮಾಡಿದ್ದರು. ನಟ ಧನುಶ್, ವಿಶಾಲ್ ಅವರ ಮೇಲೆ ನಿಷೇಧ ಸಹ ಹೇರಿದ್ದರು. ಅಲ್ಲದೆ ಬೇಡಿಕೆ ಈಡೇರುವವರೆಗೆ ನವೆಂಬರ್ 1 ರಿಂದ ತಮ್ಮ ಎಲ್ಲ ಸಿನಿಮಾ ಕೆಲಸಗಳನ್ನು ಬಂದ್ ಮಾಡುವುದಾಗಿಯೂ ತಿಳಿಸಿದ್ದಾರೆ.