ದಿನದ 24 ಗಂಟೆಯೂ ಜನಜಂಗುಳಿಯಿಂದ ತುಂಬಿರುವ ಚರ್ಚ್ ಸ್ಟ್ರೀಟ್ ನಲ್ಲಿ ಇನ್ಮುಂದೆ ಚಿತ್ರೀಕರಣಕ್ಕೆ ನಿರ್ಭಂದ ಹೇರಲಾಗಿದೆ. ಸಂಚಾರ ದಟ್ಟಣೆ ಕಾರಣ ನೀಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜನನಿಬಿಡ ಚರ್ಚ್ ಸ್ಟ್ರೀಟ್ನಲ್ಲಿ ಚಲನಚಿತ್ರ ಚಿತ್ರೀಕರಣಕ್ಕೆ ನಿರ್ಬಂಧ ಹೇರಿದೆ.
ವಿಶೇಷವಾಗಿ ವಾರಾಂತ್ಯದಲ್ಲಿ ಪಾರ್ಟಿಗೆ ಹೋಗುವವರಿಗೆ ಮತ್ತು ಖರೀದಿದಾರರಿಗೆ ಚರ್ಚ್ ಸ್ಟ್ರೀಟ್ ಬೆಂಗಳೂರಿನ ಪ್ರಮುಖ ಆಕರ್ಷಣೆಯಾಗಿದೆ. ಕಳೆದ ಭಾನುವಾರ ಚರ್ಚ ಸ್ಟ್ರೀಟ್ನಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದುದನ್ನು ಗಮನಿಸಿದ ಬಿಬಿಎಂಪಿ ಈ ಆದೇಶ ಹೊರಡಿಸಿದೆ. ಸೂಕ್ತ ಅನುಮತಿ ಪಡೆಯದೆ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಆದರೆ ನಾವು ಪೊಲೀಸರಿಂದ ಅನುಮತಿ ಪಡೆದಿದ್ದೇವೆ ಎಂದು ಮಲಯಾಳಂ ಚಿತ್ರದ ಸಿಬ್ಬಂದಿಯೊಬ್ಬರು ಹೇಳಿದರು. ಈ ಬಗ್ಗೆ ಕೇಂದ್ರೀಯ ಡಿಸಿಪಿ ಶೇಖರ್ ಎಚ್.ತೆಕ್ಕನವರ್ ಮಾತನಾಡಿ, ನಾವು ಸಿನಿಮಾ ಶೂಟಿಂಗ್ಗೆ ಅನುಮತಿ ನೀಡಿಲ್ಲ. ಬಹುತೇಕ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ತೆಗೆದುಕೊಂಡಿರಬಹುದು ಎಂದು ಹೇಳಿದ್ದಾರೆ.
ಕೆಎಫ್ಸಿಸಿ ಅಧ್ಯಕ್ಷ ಎನ್.ಎಂ.ಸುರೇಶ್ ಮಾತನಾಡಿ ನಾವು ಯಾವುದೇ ಅನುಮತಿ ನೀಡಿಲ್ಲ ಮತ್ತು ಅನುಮತಿ ನೀಡಲು ನಮಗೆ ಯಾವುದೇ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದರು. ಸಿನಿಮಾ ಚಿತ್ರೀಕರಣದಿಂದ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.ಪಾದಚಾರಿ ಮಾರ್ಗದಲ್ಲಿ ಶೂಟಿಂಗ್ ಮಾಡುತ್ತಿದ್ದರೂ, ನೂರಾರು ಜನರು ವೀಕ್ಷಿಸಲು ನಿಂತಿದ್ದರು. ನಾವು ಪ್ರಶ್ನಿಸಿದಾಗ ಅವರು ಅನುಮತಿಯನ್ನು ಪಡೆದಿದ್ದೇವೆ ಎಂದರು.