ಭಾರತದ ಮಸಾಲೆ ಪದಾರ್ಥಗಳದ ಎಂಡಿಎಚ್ ಮತ್ತು ಎವರೆಸ್ಟ್ ಮಸಾಲೆಯಲ್ಲಿ ವಿಷಕಾರಿ ಅಂಶಗಳಿರುವುದು ಪತ್ತೆಯಾಗಿದ್ದು, ಈಗಾಗಲೇ ಹಲವು ರಾಷ್ಟ್ರಗಳು ಇವುಗಳ ಆಮದನ್ನು ನಿಷೇಧಿಸಿದೆ. ಅದೇ ರೀತಿ ಇದೀಗ ನೇಪಾಳ ಕೂಡ ಎಂಡಿಎಚ್ ಮತ್ತು ಎವರೆಸ್ಟ್ ಮಸಾಲೆಗಳನ್ನು ಆಮದು ಮಾಡಿಕೊಳ್ಳದಂತೆ ಆದೇಶಿಸಿದ್ದು, ನೇಪಾಳ ಮಾರುಕಟ್ಟೆಯಲ್ಲಿ ಕೂಡ ಈ ಮಸಾಲೆಗಳ ಮಾರಾಟ ನಿಷೇಧಿಸಲಾಗಿದೆ.
ಸದ್ಯ ಈ ಎರಡೂ ಮಸಾಲೆ ಪುಡಿಗಳಲ್ಲಿರುವ ರಾಸಾಯನಿಕಗಳ ಪರೀಕ್ಷೆ ನಡೆಯುತ್ತಿದ್ದು, ಫಲಿತಾಂಶ ಬರುವವರೆಗೂ ನಿಷೇಧ ಜಾರಿಯಲ್ಲಿರುತ್ತದೆ. ಅಲ್ಲಿಯವರೆಗೂ ಈ ಮಸಾಲೆಗಳನ್ನು ಆಮದು ಮಾಡಿಕೊಳ್ಳುವುದಿಲ್ಲ ಮತ್ತು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವುದಿಲ್ಲವೆಂದು ನೇಪಾಳ ಸರ್ಕಾರ ತಿಳಿಸಿದೆ.
ಈ ಮಸಾಲೆಗಳಲ್ಲಿ ಎಥಿಲಿನ್ ಆಕ್ಸೈಡ್ ಪ್ರಮಾಣ ಹೆಚ್ಚಾಗಿದ್ದು, ಇದು ಮಾನವನಲ್ಲಿ ಕ್ಯಾನ್ಸರ್ ಹೆಚ್ಚಾಗಲು ಕಾರಣವಾಗಿದೆ. ಅಲ್ಲದೇ ಈ ರಾಸಾಯನಿಕವನ್ನು ಕ್ರಿಮಿನಾಶಕ್ಕಾಗಿ ಬಳಕೆ ಮಾಡಲಾಗುತ್ತದೆ. ಇಂಥ ರಾಸಾಯನಿಕದ ಪ್ರಮಾಣ ಮಸಾಲೆ ಪುಡಿಯಲ್ಲಿ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬಂದ ಕಾರಣಕ್ಕೆ, ಮಸಾಲೆಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಕಾರಣಕ್ಕೆ ಹಾಂಕಾಂಗ್, ಆಸ್ಟ್ರೇಲಿಯಾ, ಅಮೆರಿಕದಲ್ಲಿ ಈ ಮಸಾಲೆ ಪುಡಿಗಳನ್ನು ನಿಷೇಧಿಸಲಾಗಿದೆ.