ಹಣಕಾಸು ಅಕ್ರಮ ವರ್ಗಾವಣೆ ಮತ್ತು ಉಗ್ರರಿಗೆ ಆರ್ಥಿಕ ನೆರವು ನಿಗ್ರಹದಲ್ಲಿ ಭಾರತದ ಸಾಧನೆ ಗಮನಾರ್ಹವಾದದ್ದು ಎಂದು ಅಂತಾರಾಷ್ಟ್ರೀಯ ಹಣಕಾಸು ಕಾರ್ಯಪಡೆ ಮೆಚ್ಚುಗೆ ಸೂಚಿಸಿದೆ.
ಸಿಂಗಾಪುರದಲ್ಲಿ ನಡೆದ ಎಫ್ಎಟಿಎಫ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಉಗ್ರ ಸಂಘಟನೆಗಳಿಗೆ ಹಣದ ಹರಿವು ತಡೆಯುವ ನಿಟ್ಟಿನಲ್ಲಿ ಭಾರತ ಸರಕಾರ ಕೈಗೊಂಡಿರುವ ಕ್ರಮಗಳು ಉತ್ತಮ ಫಲಿತಾಂಶ ನೀಡುತ್ತಿವೆ. 1 ವರ್ಷ ಕಾಲ ಭಾರತ ಸರಕಾರ ರೂಪಿಸಿದ ಕ್ರಮಗಳನ್ನು ಪರಿಶೀಲನೆಗೆ ಒಳಪಡಿಸಿದ ಬಳಿಕ ಈ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ ಎಂದು ಕಾರ್ಯಪಡೆ ಹೇಳಿದೆ. ಆದರೆ ಹಣಕಾಸು ಅಕ್ರಮ ಮತ್ತು ಉಗ್ರರಿಗೆ ವಿತ್ತೀಯ ನೆರವು ನೀಡುವ ಪ್ರಕರಣಗಳಿಗೆ ಸಂಬಂಧಿಸಿದ ವಿಚಾರಣೆ ಇನ್ನೂ ವೇಗ ಪಡೆದುಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಉಗ್ರರನ್ನು ಮಟ್ಟ ಹಾಕಲು ಕೇಂದ್ರ ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಹಣಕಾಸು ಗುಪ್ತಚರ ಸಂಸ್ಥೆಗಳ ಮೂಲಕ ಉಗ್ರರಿಗೆ ವಿತ್ತೀಯ ನೆರವು ನೀಡುವ ವ್ಯವಸ್ಥೆಗಳನ್ನು ಭಾರತ ಮಟ್ಟ ಹಾಕಿದೆ ಎಂದು ಕಾರ್ಯಪಡೆ ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿದ ವಿದೇಶಾಂಗ ಇಲಾಖೆ, “ಎಫ್ಎಟಿಎಫ್ ವರದಿಯು ಭಾರತದ ಆರ್ಥಿಕತೆಯ ಸ್ಥಿರತೆ, ಸಮಗ್ರತೆಯನ್ನು ಪ್ರತಿಬಿಂಬಿಸಿದೆ’ ಎಂದು ಹೇಳಿದೆ.