ಜೈಪುರ: ಬೆಂಗಳೂರು (Bengaluru) ಮೂಲದ ನೀಟ್ (NEET) ವಿದ್ಯಾರ್ಥಿಯೊಬ್ಬ ರಾಜಸ್ಥಾನದ (Rajasthan) ಕೋಟಾ ವಿಜ್ಞಾನ ನಗರ ಪ್ರದೇಶದ ಬಹುಮಡಿ ಕಟ್ಟಡದ 10ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮೊಹಮ್ಮದ್ ನಾಸಿರ್ (22) ಮೃತಪಟ್ಟ ವಿದ್ಯಾರ್ಥಿ. ಈತ ಕಳೆದ ಒಂದು ವರ್ಷದಿಂದ ಕೋಟಾದ (Kota) ಕೋಚಿಂಗ್ ಸಂಸ್ಥೆಯಲ್ಲಿ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಭಾನುವಾರ ರಾಜಸ್ಥಾನದ ಜೈಪುರ (Jaipur) ಪರೀಕ್ಷಾ ಕೇಂದ್ರದಲ್ಲಿ ನೀಟ್ ಪರೀಕ್ಷೆಗೆ ಹಾಜರಾಗಿ ಮರುದಿನ ಕೋಟಾಗೆ ಮರಳಿದ್ದು, ತಡರಾತ್ರಿ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ. ಇದನ್ನು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದೆ.
ನಾಸಿರ್ ತನ್ನ ಸ್ನೇಹಿತರೊಂದಿಗೆ ಫ್ಲಾಟ್ನಲ್ಲಿ ವಾಸಿಸುತ್ತಿದ್ದು, ಘಟನೆ ನಡೆದ ಸಂದರ್ಭದಲ್ಲಿ ಈತನೊಂದಿಗೆ ಇರಲಿಲ್ಲ. ನಾಸಿರ್ ಸೋಮವಾರ ರಾತ್ರಿ 11 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು, ಮೃತದೇಹವನ್ನು ಎಂ.ಬಿ.ಎಸ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ನಾಸಿರ್ ಪೋಷಕರು ಬೆಂಗಳೂರಿನಿಂದ ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ವಿಜ್ಞಾನನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ದೇವೇಶ್ ಭಾರದ್ವಾಜ್ ತಿಳಿಸಿದ್ದಾರೆ.