ಬೆಂಗಳೂರು:- ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವ ಸಂಪನ್ನಗೊಂಡಿದೆ.
ತಿಗಳರ ಪೇಟೆಯ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ 10 ದಿನದಿಂದ ನಡೆಯುತ್ತಿದ್ದ ದ್ರೌಪದಿ ದೇವಿ ಕರಗಕ್ಕೆ ಕಳೆದ ರಾತ್ರಿ ವಿಶೇಷ ದಿನವಾಗಿದೆ. ಚೈತ್ರ ಪೂರ್ಣಿಮೆಯ ಈ ಮಧ್ಯರಾತ್ರಿ ಧರ್ಮರಾಯನ ದೇವಾಲಯದಿಂದ ಅರ್ಚಕ ಜ್ಞಾನೇಂದ್ರ 13ನೇ ಬಾರಿ ಕರಗವನ್ನು ಹೊತ್ತು ಹೊರಬರುತ್ತಿದ್ದಂತೆ ಅಲ್ಲಿ ಸೇರಿದ್ದ ಸಹಸ್ರಾರು ಜನರ ಗೋವಿಂದ ಗೋವಿಂದ ಉದ್ಘೋಷ ಮುಗಿಲು ಮುಟ್ಟಿತು
ಸರಿಯಾಗಿ 2 ಗಂಟೆಗೆ ಆರಂಭವಾದ ಕರಗ ಉತ್ಸವ ಪೇಟೆ ಬೀದಿಗಳಲ್ಲಿ ಸಂಚರಿಸಿ, ಅನೇಕ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿತು. ಹಾಗೆ ಮಸ್ತಾನ್ ದರ್ಗಾದಲ್ಲೂ ಪೂಜೆ ಸ್ವೀಕರಿಸಿ ಭಾವೈಕ್ಯತೆ ಸಂದೇಶ ಸಾರಿತು. ದರ್ಗಾದಲ್ಲಿ ಪೂಜೆ ಸ್ವೀಕರಿಸಿ ಅಣ್ಣಮ್ಮ ದೇವಸ್ಥಾನ ತಲುಪಿದ ಕರಗೆರವಣಿಗೆ ಅಲ್ಲೂ ಪೂಜೆ ಸ್ವೀಕರಿಸಿತು. ಹೀಗೆ ಪೇಟೆ ಬೀದಿಗಳ ದೇಗುಲಗಳಿಗೆ ತೆರಳಿ ಸಂಪ್ರದಾಯದಂತೆ ಪೂಜೆ ಸ್ವೀಕರಿಸಿತು.
ಕರಗ ಕುಂಬಾರಪೇಟೆ ರಸ್ತೆ ಮೂಲಕ ಸಾಗಿ, ರಾಜ ಮಾರುಕಟ್ಟೆ ವೃತ್ತ, ಕೆ.ಆರ್.ಮಾರುಕಟ್ಟೆ ವೃತ್ತದ ಮೂಲಕ ಸಾಗಿ ನಂತರ, ಕೋಟೆ ಆಂಜನೇಯ ಸ್ವಾಮಿ ದೇಗುಲಕ್ಕೆ ತೆರಳಿ ಪೂಜೆ ಸ್ವೀಕರಿಸಿ, ನಂತರ ಕೆ.ಆರ್. ಮಾರುಕಟ್ಟೆ ವೃತ್ತಕ್ಕೆ ವಾಪಾಸಾಗಿ ಕಾಟನ್ಪೇಟೆ ಪೊಲೀಸ್ ಠಾಣೆ ರಸ್ತೆಯಲ್ಲಿ ತೆರಳಿ, ಅಲ್ಲಿನ ಮಸ್ತಾನ್ಸಾಬ್ ದರ್ಗಾಕ್ಕೆ ತೆರಳಿ ಪೂಜೆ ಸ್ವೀಕರಿಸಿತು. ದರ್ಗದ ನಂತರ ಬಳೇಪೇಟೆ ವೃತ್ತದ ಮೂಲಕ ಅಣ್ಣಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ ಸ್ವೀಕರಿಸಿ, ಧರ್ಮರಾಯನ ಸ್ವಾಮಿ ದೇವಸ್ಥಾನಕ್ಕೆ ಮರಳಿದೆ.
ಬೆಂಗಳೂರು ಕರಗವು 8 ಶತಮಾನಗಳ ಇತಿಹಾಸವನ್ನ ಹೊಂದಿದೆ. ಆದಿ ಶಕ್ತಿ ಸ್ವರೂಪಿಣಿಯಾದ ದ್ರೌಪದಿ ಆರಾಧನೆಗಾಗಿ ಮೀಸಲಿಡಲಾಗಿದೆ. ಕರಗವನ್ನು ಬೆಂಗಳೂರಿನ ಗ್ರಾಮ ಉತ್ಸವ ಎಂದು ಸಹ ಕರೆಯಲಾಗುತ್ತದೆ. ಹಿಂದೂ ಮತ್ತು ಮುಸ್ಲಿಂ ಭಾವೈಕ್ಯತೆ ಸಂದೇಶ ಸಾರುತ್ತದೆ.