ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲಿಯೇ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದೆ. ಬೆಂಗಳೂರಿನ ನೂತನ ಪೊಲೀಸ್ ಆಯುಕ್ತರನ್ನಾಗಿ ಬಿ.ದಯಾನಂದ್ ಅವರನ್ನು ನೇಮಕ ಮಾಡಲಾಗಿದೆ. ಇಲ್ಲಿವರೆಗೂ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಸಿಎಚ್ ಪ್ರತಾಪ್ ರೆಡ್ಡಿ ಅವರನ್ನು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಬಿ.ದಯಾನಂದ್ ಅವರು ಇಂಟಲಿಜೆನ್ಸ್ ADGPಯಾಗಿದ್ದರು ಹಾಗೂ ಬೆಂಗಳೂರು ಟ್ರಾಫಿಕ್ ಕಮೀಷನರ್ ಆಗಿ ಕೂಡ ಸೇವೆ ಸಲ್ಲಿಸಿದ್ದಾರೆ.
ರಾಣೆಬೆನ್ನೂರು ಮೂಲದ ದಯಾನಂದ್ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿ ಹೆಸರು ಗಳಿಸಿದವರು. ಸರ್ಕಾರವು ಹಾಲಿ ಕಮಿಷನರ್ ಪ್ರತಾಪ್ ರೆಡ್ಡಿ ಆಂತರಿಕ ಭದ್ರತೆ DGPಯಾಗಿ ನೇಮಕ ಹಾಗೂ ಡಾ.ಎಂ.ಎ ಸಲೀಂಗೆ CID ಡಿಜಿ ಹುದ್ದೆ ನೀಡಲಾಗಿದೆ. ಇಂಟಲಿಜೆನ್ಸ್ ADGPಯಾಗಿ K.V. ಶರತ್ಚಂದ್ರ ನೇಮಕ ಮಾಡಲಾಗಿರುವ ಆದೇಶವನ್ನು ಹೊರಡಿಸಿದೆ
ಬೆಂಗಳೂರು ನಗರದ ಎಡಿಜಿಪಿ ಮತ್ತು ವಿಶೇಷ ಆಯುಕ್ತ (ಸಂಚಾರ) ಡಾ. ಎಂ.ಎ. ಸಲೀಂ ಅವರನ್ನು ಬೆಂಗಳೂರಿನ ಅಪರಾಧ ತನಿಖಾ ಇಲಾಖೆ (ಸಿಐಡಿ), ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ಡಿಜಿಪಿಯಾಗಿ ಬಡ್ತಿ ನೀಡಿ ನೇಮಿಸಲಾಗಿದೆ. ಇದೇ ವೇಳೆ ಬೆಂಗಳೂರಿನ ಸಿಐಡಿ ಎಡಿಜಿಪಿ ಕೆ.ವಿ. ಶರತ್ ಚಂದ್ರ ಅವರನ್ನು ವರ್ಗಾವಣೆ ಮಾಡಿ ಗುಪ್ತಚರ ವಿಭಾಗದ ಎಡಿಜಿಪಿಯಾಗಿ ನೇಮಿಸಲಾಗಿದೆ.
ಸಿಬಿಐ ನಿರ್ದೇಶಕರಾಗಿ ಪ್ರವೀಣ್ ಸೂದ್ ನೇಮಕವಾದ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರ ಡಾ. ಅಲೋಕ್ ಮೋಹನ್ ಅವರನ್ನು ರಾಜ್ಯ ಪೊಲೀಸ್ ಇಲಾಖೆ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ.
ಬೆಂಗಳೂರಿನ ನೂತನ ಪೊಲೀಸ್ ಕಮಿಷನರ್ ಬಿ. ದಯಾನಂದ್ ಕಿರು ಪರಿಚಯ
ಬಿ. ದಯಾನಂದ ಅವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಪಟ್ಟಣದವರಾಗಿದ್ದು ಹಿರಿಯ ಐಪಿಎಸ್ ಅಧಿಕಾರಿ. ಅವರು 1994ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದು, ಮೈಸೂರು ನಗರದ ಆಯುಕ್ತರಾಗಿ, ಬೆಂಗಳೂರು ನಗರದ ಜಂಟಿ ಆಯುಕ್ತ (ಅಪರಾಧ) ಮತ್ತು ಬೆಂಗಳೂರಿನಲ್ಲಿ ಸಂಚಾರ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.
ಸಿದ್ದರಾಮಯ್ಯ, ಹೆಚ್.ಡಿ. ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಅವರ ಅವಧಿಯಲ್ಲಿ ದಯಾನಂದ ಅವರು ಗುಪ್ತಚರ ಇಲಾಖೆಯ ನೇತೃತ್ವ ವಹಿಸಿದ್ದರು. ದಯಾನಂದ ಅವರು 1998ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸಿಪಿ) ತಮ್ಮ ಸೇವೆಯನ್ನು ಪ್ರಾರಂಭಿಸಿದರು. ಅವರು 2008ರ ವರೆಗೆ ದಕ್ಷಿಣ ಕನ್ನಡ, ಕೋಲಾರ, ಚಿತ್ರದುರ್ಗ, ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳ ಎಸ್ಪಿಯಾಗಿ ಸೇವೆ ಸಲ್ಲಿಸಿದರು.
ದಯಾನಂದ ಅವರು 2008 ರಲ್ಲಿ ಡಿಐಜಿಯಾಗಿ ಬಡ್ತಿ ಪಡೆದರು. ಅವರು 2011 ರಲ್ಲಿ ಬೆಂಗಳೂರಿನಲ್ಲಿ ಜಂಟಿ ಪೊಲೀಸ್ ಆಯುಕ್ತರಾಗಿ ಮತ್ತು 2013 ರಲ್ಲಿ ನಗರದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದರು. ಅವರು 2015 ರಲ್ಲಿ ಮೈಸೂರು ಪೊಲೀಸ್ ಆಯುಕ್ತರಾಗಿ ಮತ್ತು ರಾಜ್ಯ ಗುಪ್ತಚರ ಐಜಿಪಿಯಾಗಿ ಸೇವೆ ಸಲ್ಲಿಸಿದರು. ದಯಾನಂದ ಅವರು ಕೇಂದ್ರ ವ್ಯಾಪ್ತಿಯ ಐಜಿಪಿ ಸ್ಥಾನವನ್ನೂ ಅಲಂಕರಿಸಿದ್ದರು. ಆಗಸ್ಟ್ 2020 ರಿಂದ ಪ್ರಾರಂಭಿಸಿ, ಅವರು ರಾಜ್ಯ ಗುಪ್ತಚರ ಎಡಿಜಿ ಆಗಿ ಸೇವೆ ಸಲ್ಲಿಸಿದರು.