ಮುಂಬೈ: ಕ್ವಿಂಟನ್ ಡಿಕಾಕ್ (Quinton de Kock), ಹೆನ್ರಿಚ್ ಕ್ಲಾಸೆನ್ (Heinrich Klaasen) ಸ್ಫೋಟಕ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ದಾಳಿ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲಾದೇಶದ ವಿರುದ್ಧ 149 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಪೈಕಿ 4ರಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದಿದೆ. 5ರಲ್ಲಿ 5 ಪಂದ್ಯಗಳಲ್ಲೂ ಗೆಲುವು ಸಾಧಿಸಿರುವ ಭಾರತ ಮೊದಲ ಸ್ಥಾನದಲ್ಲಿದ್ದರೆ, 4 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ನ್ಯೂಜಿಲೆಂಡ್ ತಂಡ 3ನೇ ಸ್ಥಾನಕ್ಕೆ ಕುಸಿದಿದೆ
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ (South Africa) ತಂಡ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 382 ರನ್ ಬಾರಿಸಿತ್ತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶ (Bangladesh) ತಂಡವು 46.4 ಓವರ್ಗಳಲ್ಲಿ 233 ರನ್ಗಳಿಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿತು
ಚೇಸಿಂಗ್ ಆರಂಭಿಸಿದ ಬಾಂಗ್ಲಾದೇಶ ತಂಡವು ಆರಂಭದಲ್ಲೇ ಅಗ್ರ ಕ್ರಮಾಂಕದ ಬ್ಯಾಟರ್ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 6 ಓವರ್ಗಳಲ್ಲಿ 30 ರನ್ಗಳಿಸಿ ಸ್ಫೋಟಕ ಇನ್ನಿಂಗ್ಸ್ ಆರಂಭಿಸಿದ್ದ ಬಾಂಗ್ಲಾದೇಶ ಬಳಿಕ ಒಂದೊಂದೇ ವಿಕೆಟ್ಗಳನ್ನ ಕಳೆದುಕೊಂಡಿತು. ಕೇವಲ 16 ರನ್ಗಳ ಅಂತರದಲ್ಲೇ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ಇಲ್ಲಿಂದ ಬಾಂಗ್ಲಾದ ಅವನತಿ ಶುರುವಾಯಿತು. 12ನೇ ಓವರ್ನಲ್ಲಿ 46 ರನ್ ಗಳಿಸಿದ್ದ ತಂಡ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ನಾಯಕ ಶಕೀಬ್ ಅಲ್ ಹಸನ್ ಕೂಡ 1 ರನ್ಗಳಿಗೆ ವಿಕೆಟ್ ಕೈಚೆಲ್ಲಿದರು.