ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದಿರುವ ಬಾಂಗ್ಲಾದೇಶದ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಾಧೀಶ ಉಬೈದುಲ್ ಹಸನ್ ತಮ್ಮ ರಾಜೀನಾಮೆ ನೀಡಲು ಒಪ್ಪಿದ್ದಾರೆ ಎಂದು ಸ್ಥಳೀಯ ವಾಹಿನಿ ವರದಿ ಮಾಡಿದೆ.
ಕಳೆದ ವರ್ಷ ಸಿಜೆ ಆಗಿ ನೇಮಕಗೊಂಡಿದ್ದ ಹಸನ್, ಹಸೀನಾ ಪ್ರಧಾನಿಯಾಗಿದ್ದ ಅವಧಿಯಲ್ಲಿ ವಿರೋಧಿಗಳನ್ನು ಗಲ್ಲಿಗೇರಿಸುವ ಆದೇಶ ನೀಡಿದ್ದ ಯುದ್ಧಾಪರಾಧಗಳ ನ್ಯಾಯಮಂಡಳಿಯ ಮೇಲುಸ್ತುವಾರಿ ವಹಿಸಿದ್ದರು. ಶನಿವಾರ ಢಾಕಾದಲ್ಲಿ ಸುಪ್ರೀಂಕೋರ್ಟ್ ಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ಸಿಜೆ ಹಾಗೂ ಇತರ ನ್ಯಾಯಾಧೀಶರು ಮಧ್ಯಾಹ್ನ 1 ಗಂಟೆಯೊಳಗೆ ರಾಜೀನಾಮೆ ನೀಡಲು ಗಡು ವಿಧಿಸಿದ್ದರು. ಅಧ್ಯಕ್ಷ ಮುಹಮ್ಮದ್ ಶಹಾಬುದ್ದೀನ್ ಜತೆ ಸಮಾಲೋಚಿಸಿದ ಬಳಿಕ ಸಿಜೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.