ನವದೆಹಲಿ: ಕೇವಲ 3 ಸಾವಿರ ರೂ.ಗೆ 21 ವರ್ಷದ ಯುವಕನೊಬ್ಬನನ್ನು ಚುಚ್ಚಿ ಚುಚ್ಚಿ ಕೊಂದ ಘಟನೆ ದಕ್ಷಿಣ ದೆಹಲಿಯ (South Delhi) ಟಿಗ್ರಿ ಪ್ರದೇಶದಲ್ಲಿ ನಡೆದಿದೆ. ಮೃತನನ್ನು ಯೂಸುಫ್ ಎಂದು ಗುರುತಿಸಲಾಗಿದ್ದು, ಈತ ಸಂಗಮ್ ವಿಹಾರ್ ನಿವಾಸಿ. ಈತನಿಗೆ ಹಾಡಹಗಲೇ ಶಾರುಖ್ ಎಂಬಾತ ಚಾಕುವಿನಿಂದ ಇರಿದಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಖತ್ ವೈರಲ್ ಆಗಿವೆ.
ಇಂದು ಬೆಳಗ್ಗೆ ಚಾಕು ಇರಿದ ಪ್ರಕರಣದ ಮಾಹಿತಿಯೊಂದು ಟಿಗ್ರಿ ಪೊಲೀಸ್ ಠಾಣೆಯ (Tigri Police Station) ಅಧಿಕಾರಿಗಳಿಗೆ ಕರೆ ಬಂದಿದೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಯೂಸುಫ್ ಅಲಿಯನ್ನು ಬಾತ್ರಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಆತ ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ಪೊಲೀಸ್ ಉಪ ಆಯುಕ್ತ (ದಕ್ಷಿಣ) ಚಂದನ್ ಚೌಧರಿ ತಿಳಿಸಿದ್ದಾರೆ.
ಈ ಸಂಬಂಧ ಯೂಸುಫ್ ತಂದೆ ಪ್ರತಿಕ್ರಿಯಿಸಿ, ಶಾರುಖ್ನಿಂದ ಯೂಸುಫ್ 3,000 ರೂ. ಸಾಲ ಪಡೆದಿದ್ದನು. ಬಳಿಕ ಈ ಹಣವನ್ನು ಹಿಂದಿರುಗಿಸುವಂತೆ ಆತ ಪೀಡಿಸುತ್ತಿದ್ದನು. ಅಂತೆಯೇ ತನ್ನ ಮಗನಿಗೆ ಸುಮಾರು ಮೂರು-ನಾಲ್ಕು ದಿನಗಳ ಹಿಂದೆ ಶಾರುಖ್ ಬೆದರಿಕೆ ಕೂಡ ಹಾಕಿದ್ದನು ಎಂದು ಹೇಳಿದರು.
ವೈರಲ್ ವೀಡಿಯೋದಲ್ಲೇನಿದೆ..?: 2-3 ನಿಮಿಷ ಇರುವ ವೀಡಿಯೋದಲ್ಲಿ ಯುವಕ ಯೂಸುಫ್ಗೆ ರಸ್ತೆಯುದ್ದಕ್ಕೂ ಚಾಕುವಿನಿಂದ ಚುಚ್ಚುತ್ತಿರುವುದನ್ನು ಕಾಣಬಹುದಾಗಿದೆ. ರಸ್ತೆ ಬದಿಯಲ್ಲಿ ಜನ ನೋಡುತ್ತಿದ್ದರೂ ಯಾರೊಬ್ಬರೂ ಯೂಸುಫ್ ರಕ್ಷಣೆಗೆ ಬರಲಿಲ್ಲ. ಇತ್ತ ಯೂಸುಫ್ಗೆ ತೀವ್ರ ರಸ್ತಸ್ರಾವವಾಗುತ್ತಿದ್ದರೂ ಆತ ದಾಳಿಕೋರನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.
ಆದರೂ ಬಿಡದೇ ಶಾರುಖ್ ಚುಚ್ಚಿದ್ದಾನೆ. ಕೊನೆಗೆ ಯಾರೋ ಒಂದಿಬ್ಬರು ಯೂಸುಫ್ ರಕ್ಷಣೆಗೆ ಬಂದಿದ್ದು, ಅವರ ಮೇಲೆಯೂ ಶಾರುಖ್ ಹಲ್ಲೆ ಮಾಡಿದ್ದಾನೆ. ಸದ್ಯ ಸಂಗಮ್ ವಿಹಾರ್ನ ಕೆ 2 ಬ್ಲಾಕ್ನ ನಿವಾಸಿ ಶಾರುಖ್ನನ್ನು ಪೊಲೀಸರು ಬಂಧಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಶಾರುಖ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.