ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಸಿಟಿ ರೌಡಿ ರೀತಿ ಮಾತನಾಡಿದರೆ ಓಕೆ, ಆದರೆ ಗಲ್ಲಿ ರೌಡಿ ತರ ಮಾತನಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿ, ಸಿಎಂ ಸಿಟಿ ರೌಡಿ ತರ ಮಾತನಾಡಿದರೆ ಪರವಾಗಿಲ್ಲ. ಆದರೆ, ಗಲ್ಲಿ ರೌಡಿ ತರ ಮಾತನಾಡುತ್ತಿದ್ದಾರೆ. ಎಂತೆಂಥ ಮುಖ್ಯಮಂತ್ರಿಗಳನ್ನು ರಾಜ್ಯ ಕಂಡಿದೆ. ಅವರಾರು ಈ ರೀತಿಯಲ್ಲಿ ಮಾತನಾಡಿಲ್ಲ. ಸಿಎಂ ಸ್ಥಾನದ ಘನತೆ ಗೌರವ ಇಲ್ಲದಾಗಿದೆ ಇವತ್ತು. ಧಮ್ಮು, ತಾಕತ್ತು ಗಂಡಸ್ತನದ ಬಗ್ಗೆ ಮಾತನಾಡುತ್ತಾರೆ, ಇದು ಶೇಮ್. ರಾಜಕಾರಣಿಗಳು ಹೀಗೆಲ್ಲಾ ಮಾತನಾಡಬಾರದು ಎಂದರು.
ವರುಣಾದಲ್ಲಿ ಸಿದ್ದು ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪದ ಬಗ್ಗೆ ಮಾತನಾಡಿ, ವರುಣಾದಲ್ಲಿ ಯಾವುದೇ ಮ್ಯಾಚ್ ಫಿಕ್ಸಿಂಗ್ ಆಗಿಲ್ಲ,ಎಲ್ಲಾ ಸುಳ್ಳು. ಕುಮಾರಸ್ವಾಮಿ ಕುಟುಂಬದಲ್ಲಿ ಮ್ಯಾಚ್ ಫಿಕ್ಸಿಂಗ್ ಆಗ್ತಿಲ್ವೇ? ಹಾಗೆಲ್ಲಾ ಕುಮಾರಸ್ವಾಮಿ ಮಾತನಾಡಬಾರದು ಎಂದು ತಿರುಗೇಟು ನೀಡಿದರು.
ಅಮೂಲ್ ರಾಜ್ಯದ ಮಾರುಕಟ್ಟೆ ಪ್ರವೇಶ ವಿಚಾರವಾಗಿ, ಎಲ್ಲವನ್ನು ಗುಜರಾತ್ ಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ನಂದಿನಿ ಕನ್ನಡಿಗರ ಅಸ್ಮಿತೆ. ಇದರಿಂದ ಸಾಕಷ್ಟು ಕುಟುಂಬ ಬದುಕುತ್ತಿದೆ. ಅದನ್ನು ತೆಗೆದುಕೊಂಡು ಗುಜರಾತ್ಗೆ ಅಡ ಇಟ್ಟರೆ ಯಾರೂ ಒಪ್ಪಲ್ಲ. ಒಂದು ದೇಶ ಒಂದು ಹಾಲು ಒಂದು ಕುರಿ ಎನ್ನುತ್ತಾರೆ.ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ ಎಂದು ಹೇಳಿದರು. ಬಾಂಬೆ ಡೈರಿ ಪುಸ್ತಕ ಬಿಡುಗಡೆ ವಿಚಾರವಾಗಿ, ಬುಟ್ಟಿಯಲ್ಲಿ ಸರಿಯಾದ ಹಾವು ಇದೆ ಎಂದು ಇದೇ ಸಂದರ್ಭದಲ್ಲಿ ಮಾರ್ಮಿಕವಾಗಿ ತಿಳಿಸಿದರು.