ವಾಷಿಂಗ್ಟನ್: ಬಾಸ್ಕೆಟ್ಬಾಲ್ ನ ದಂಥಕತೆ ಅಮೆರಿಕದ ಮೈಕಲ್ ಜೋರ್ಡನ್ ಅವರು 1998ರ ಎನ್ಬಿಎ ಟೂರ್ನಿಯ ಫೈನಲ್ ಪಂದ್ಯದಲ್ಲಿ ಧರಿಸಿದ್ದ ಶೂ ಹರಾಜಿನಲ್ಲಿ 18 ಕೋಟಿ ರೂ.ಗೆ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ.
1998ರಲ್ಲಿ ನಡೆದ ಎನ್ಬಿಎ ಜೋರ್ಡನ್ ಅವರ ವೃತ್ತಿಜೀವನದ ಕೊನೆಯ ಟೂರ್ನಿ ಆಗಿದ್ದು, ಷಿಕಾಗೊ ಬುಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಮೈಕಲ್ ಯೂಟಾ ಜಾಝ್ ತಂಡದ ವಿರುದ್ಧದ ಫೈನಲ್ನಲ್ಲಿ 37 ಪಾಯಿಂಟ್ಸ್ ಕಲೆಹಾಕಿದ್ದರು. ಇದರಿಂದ ಬುಲ್ಸ್ ತಂಡ 93-88 ಪಾಯಿಂಟ್ಸ್ಗಳಿಂದ ಜಯಿಸಿತ್ತು.
ಆ ಪಂದ್ಯದಲ್ಲಿ ಜೋರ್ಡನ್ ವಿವಿಧ ಶೂಗಳನ್ನೂ ಧರಿಸಿದ್ದು, ಅವರು ಕೊನೆಯದಾಗಿ ಧರಿಸಿದ್ದ ಶೂಗಳನ್ನ ಹರಾಜಿಗೆ ಇಡಲಾಗಿತ್ತು ಎಂದು ನ್ಯೂಯಾರ್ಕ್ನ ಸೋದೆಬೀಸ್ ಹರಾಜು ಸಂಸ್ಥೆ ತಿಳಿಸಿದೆ. ಸೋದೆಬೀಸ್ ಸಂಸ್ಥೆ ನಡೆಸಿದ ಹರಾಜಿನಲ್ಲಿ ಶೂಗಳು ಇಷ್ಟೊಂದು ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದು ಇದೇ ಮೊದಲು. ಅಮೆರಿಕದ ಗಾಯಕ ಕಾವ್ಯ ವೆಸ್ಟ್ ಅವರ ಶೂಗಳು 2021ರ ಹರಾಜಿನಲ್ಲಿ 14.74 ಕೋಟಿ ರೂ. ಮೊತ್ತಕ್ಕೆ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿತ್ತು. ಇದೀಗ ಆ ದಾಖಲೆಯನ್ನು ಮೈಕಲ್ ಜೋರ್ಡನ್ ಶೂಗಳು ಮುರಿದಿವೆ.