ದಾವಣಗೆರೆ: ಮಲೆನಾಡಿನಲ್ಲಿ ಮಳೆಯ ಪ್ರಮಾಣ ಹೆಚ್ಚಾದ ಹಿನ್ನೆಲೆ ದಾವಣಗೆರೆ ಭಾಗದಲ್ಲಿ ತುಂಗಭದ್ರ ನದಿ ಉಕ್ಕಿ ಹರಿಯುತ್ತಿದೆ. ಪರಿಣಾಮ ಉಕ್ಕಡಗಾತ್ರಿ ದೇವಾಲಯದ ಸ್ನಾನ ಘಟ್ಟ ಹಾಗೂ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಳುಗಡೆಯಾಗಿವೆ.
ತುಂಗಾ ನದಿಗೆ 75 ಸಾವಿರ ಕ್ಯೂಸೆಕ್ಗೂ ಹೆಚ್ಚು ನೀರು ಹೊರ ಬಿಡಲಾಗಿದ್ದು, ಹೊನ್ನಾಳಿ, ಹರಿಹರ ಸೇರಿದಂತೆ ನದಿ ಪಾತ್ರದ ಪ್ರದೇಶಗಳು ಮುಳುಗಡೆಯಾಗಿವೆ.
ಉಕ್ಕಡಗಾತ್ರಿಗೆ ಪ್ರವೇಶ ಮಾಡುವ ಒಂದು ರಸ್ತೆ ಸಹ ಮುಳುಗಡೆಯಾಗಿದೆ. ಅಲ್ಲದೇ ದೇವಾಲಯದ ಮುಂಭಾಗದವರೆಗೂ ನೀರು ಬಂದಿದೆ.
ಉಕ್ಕಡಗಾತ್ರಿ ಭಾಗಕ್ಕೆ ಪ್ರವೇಶಿಸುವ ರಸ್ತೆಗೆ ಸೂಕ್ತ ಸೇತುವೆ ಮಾಡಿಸಿ ಎಂದು ದಶಕಗಳಿಂದ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿ ವರ್ಷ ನದಿಯಲ್ಲಿ ನೀರು ಹೆಚ್ಚಾದಾಗ ಎರಡು ರಸ್ತೆಗಳು ಬಂದ್ ಆಗಿ ಜನರಿಗೆ ತೊಂದರೆಯಾಗುತ್ತದೆ ಎಂದು ಜನ ಆಕ್ರೋಶ ಹೊರಹಾಕಿದ್ದಾರೆ.
ಮಳೆಯ ಅಬ್ಬರದಿಂದ ಹೊನ್ನಾಳಿ, ಹರಿಹರ ಸೇರಿದಂತೆ ಹಲವು ಕಡೆಗಳಲ್ಲಿ ವಸತಿ ಪ್ರದೇಶಕ್ಕೆ ನದಿಯ ನೀರು ನುಗ್ಗುವ ಆತಂಕ ಎದುರಾಗಿದೆ. ನದಿಯಲ್ಲಿ ಹೊರ ಹರಿವು ಕಡಿಮೆಯಾಗದಿದ್ದರೆ ಜನರನ್ನು ಸ್ಥಳಾಂತರ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.