ಬೆಂಗಳೂರು: ಮಂತ್ರಿ ಮಾಲ್ʼಗೆ ಬೀಗ ಜಡಿದು ಪರವಾನಗಿ ರದ್ದು ಮಾಡಲಾಗಿದೆ. ಹೌದು ಕೋಟಿ ಕೋಟಿ ರೂಪಾಯಿ ತೆರಿಗೆ ಹಣ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ಗೆ ಬೀಗ ಜಡಿದಿದ್ದಾರೆ. ಸುಮಾರು 32 ಕೋಟಿ ವರೆಗೂ ಮಂತ್ರಿ ಮಾಲ್ ತೆರಿಗೆ ಪಾವತಿ ಉಳಿಸಿಕೊಂಡಿದೆಯಂತೆ.
ಈ ಹಿಂದೆಯೂ ಅನೇಕ ಬಾರಿ ತೆರಿಗೆ ವಿಚಾರವಾಗಿ ಮಾಲ್ ಗೆ ಬೀಗ ಹಾಕಲಾಗಿತ್ತು. ಇದೀಗ ಮತ್ತೆ ಇಂದು ಮಾಲ್ ಗೆ ಬೀಗ ಹಾಕಿದ್ದು, ಮುಖ್ಯ ಪ್ರವೇಶ ದ್ವಾರಕ್ಕೆ ಅಧಿಕಾರಿಗಳು ಬೀಗ ಜಡಿದಿರುವುದನ್ನು ಕಂಡು ಎಂದಿನಂತೆ ಕೆಲಸಕ್ಕೆ ಬಂದಿದ್ದ ಸಿಬ್ಬಂದಿ ಶಾಕ್ ಆಗಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಮಾರ್ಷಲ್ ಹಾಗೂ ಪೊಲೀಸರ ಬಿಗಿ ಭದ್ರತೆಯಲ್ಲಿ ಮಾಲ್ ಗೆ ಬೀಗ ಹಾಕಿದ್ದಾರೆ.
ಎಂದಿನಂತೆ ಕೆಲಸಕ್ಕೆ ಬಂದಿರುವ ಬಟ್ಟೆ, ಸೂಪರ್ ಮಾರ್ಕೆಟ್, ಮೇಕ್ ಅಪ್ ಸೇರಿ ಮಾಲ್ ಒಳಗಿರುವ ಹಲವು ಮಳಿಗೆಗಳ ಸಿಬ್ಬಂದಿ ಕಂಗಲಾಗಿ ಹೊರ ಭಾಗದಲ್ಲಿ ಕುಳಿತ್ತಿದ್ದ ದೃಶ್ಯಗಳು ಕಂಡು ಬಂತು. ಈ ಹಿಂದೆಯೂ ಅನೇಕ ಬಾರಿ ತೆರಿಗೆ ಪಾವತಿ ಆಗಿಲ್ಲ ಅಂತ ಅನೇಕ ಬಾರಿ ಬಿಬಿಎಂಪಿ ನೋಟಿಸ್ ಜಾರಿ ಮಾಡಿತ್ತು. ಆದರೆ ಈಗ ಮತ್ತೊಮ್ಮೆ ಬೀಗ ಹಾಕುವ ಮೂಲಕ ಶಾಕ್ ನೀಡಿದೆ.