ಬೆಂಗಳೂರು: ಮಹದೇವಪುರ ಕ್ಷೇತ್ರದ ಕಾಡುಗುಡಿಯ ಸಿದ್ದಾರ್ಥ ಬಡಾವಣೆಗೆ ಮೂಲಭೂತ ಸೌಕರ್ಯ ಕಲ್ಪಿಸು ವಂತೆ ಒತ್ತಾಯಿಸಿ ಕರ್ನಾಟಕ ದಲಿತ ಕ್ರಿಯಾ ವೇದಿಕೆ ಹಾಗು ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಕಾಡುಗುಡಿ ಮುಖ್ಯ ರಸ್ತೆಯಲ್ಲಿ ರ್ಯಾಲಿ ನಡೆಸಿ ಬಿಬಿಎಂಪಿ ವಾರ್ಡ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಸಿದ್ಧಾರ್ಥ ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳ ಒದಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು..
ಬಳಿಕ ಮಾತನಾಡಿದ ಕರ್ನಾಟಕ ದಲಿತ ಕ್ರಿಯಾ ವೇದಿಕೆ ಕಾರ್ಯಾದ್ಯಕ್ಷ ಕಾಡುಗುಡಿ ಸೊಣ್ಣಪ್ಪ ಅವರು ಸಿದ್ದಾರ್ಥ ಬಡಾವಣೆಗೆ ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಸರ್ಕಾರದ ಪ್ರತಿನಿಧಿಗಳು ಹಾಗೂ ಪಾಲಿಕೆ ಅಧಿಕಾರಿಗಳು ವಿಫಲರಾಗಿದ್ದು, ಕಾಡುಗುಡಿ ಪೂರ್ವ ಭಾಗದಲ್ಲಿ ಬಿಬಿಎಂಪಿ ಮತ್ತು ರೈಲ್ವೆ ಇಲಾಖೆ ಸಹಭಾಗಿತ್ವದಲ್ಲಿ ರೈಲ್ವೆ ಕೆಳಸೇತುವೆ ನಿರ್ಮಾಣದಿಂದಾಗಿ ಸಿದ್ದಾರ್ಥ ಬಡಾವಣೆ ರಸ್ತೆ ಸಂಪರ್ಕ ಕಳೆದುಕೊಂಡು ಜನರು ಓಡಾಡಲು ಬಾರದ ಪರಿಸ್ಥಿತಿ ಬಂದಿದ್ದು ಇದರ ವಿಚಾರವಾಗಿ ರೈಲ್ವೆ ಇಲಾಖೆ ಮತ್ತು ಬಿಬಿಎಂಪಿಗೆ ಮನವಿ ಸಲ್ಲಿಸಿದರೂ ಹಿರಿಯ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.
ಜನ ಪ್ರತಿನಿಧಿಗಳು ತಮ್ಮನ್ನು ಬರಿ ಓಟಿಗಾಗಿ ಬಳಸಿಕೊಂಡಿದ್ದು ತಮ್ಮ ಸಮಸ್ಯೆ ಗಳನ್ನು ಬಗೆಹರಿಸದಿದ್ದಲ್ಲಿ ಮುಂದೆ ಬರುವ ಯಾವುದೇ ಚುನಾವಣೆಯಲ್ಲಿ ಮತದಾನ ಮಾಡದೆ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದರು. ಕರ್ನಾಟಕ ದಲಿತ ಕ್ರಿಯಾ ವೇದಿಕೆ ಹಾಗು ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆಯ ಬೇಡಿಕೆಗಳನ್ನು ಪರಿಶೀಲನೆ ಮಾಡಲು ಬಿಬಿಎಂಪಿ ಈ ಭಾಗದ ಇಇ ಸ್ಥಳಕ್ಕೆ ಬಂದು ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.