ಕೋಲ್ಕತಾ:– ಕೋಲ್ಕೊತಾ ಆಸ್ಪತ್ರೆಯೊಂದರಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪಶ್ಚಿಮ ಬಂಗಾಳದ ಕೋಲ್ಕತಾದ ಮೆಟಿಯಾಬುರೋಜ್ ಸೂಪರ್ ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ, ಸುಮಾರು 16 ಜನರು ದೃಷ್ಟಿ ಕಳೆದುಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದರಲ್ಲಿ ಕೆಲವು ರೋಗಿಗಳಿಗೆ ಸರಿಯಾಗಿ ನೋಡಲು ಸಹ ಸಾಧ್ಯವಾಗುತ್ತಿಲ್ಲ. ಆದರೆ ಈ ರೋಗಿಗಳ ಕಣ್ಣುಗಳಲ್ಲಿ ಶಿಲೀಂಧ್ರಗಳ ಸೋಂಕು ಕಾಣಿಸಿಕೊಂಡಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಆದಾಗ್ಯೂ, ಈ ಸೋಂಕು ಹೇಗೆ ಸಂಭವಿಸಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಪರಿಸ್ಥಿತಿ ಆರೋಗ್ಯ ಇಲಾಖೆಯಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಾದ ಕೇವಲ ನಾಲ್ಕು ದಿನಗಳ ನಂತರ ರೋಗಿಗಳಲ್ಲಿ ಸೋಂಕುಗಳು ಕಾಣಿಸಿಕೊಂಡಿವೆ. ಆಸ್ಪತ್ರೆಯ ಹೊರಗೆ ಸೋಂಕು ತಗುಲಿದ್ದರೆ, ಸುಮಾರು ಮೂರು ವಾರಗಳ ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದವು. ಹಾಗಾಗಿ ಶಸ್ತ್ರಚಿಕಿತ್ಸೆ ಸಮಯದಲ್ಲಿ ಬಳಸಿದ ಯಾವುದರಿಂದಾದರೂ ಉಪಕರಣಗಳಿಂದ ಸೋಂಕು ಬಂದಿರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ
ಸೋಂಕಿನ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ. ಆಸ್ಪತ್ರೆಯl ಆಪರೇಟಿಂಗ್ ಥಿಯೇಟರ್ ಅತ್ಯಾಧುನಿಕವಾಗಿದ್ದು, ಅಲ್ಲಿ ಸೋಂಕು ಹುಟ್ಟುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಆದರೆ, ಶಿಲೀಂಧ್ರಗಳ ಸೋಂಕಿನ ನಿಖರವಾದ ಕಾರಣ ತಿಳಿದುಬಂದಿಲ್ಲ.ಇದಕ್ಕೆ ಕಾರಣವನ್ನು ಕಂಡುಹಿಡಿಯಲು ಮತ್ತು ಇಂತಹ ಘಟನೆಗಳು ಮತ್ತೆ ಆಗದಂತೆ ತಡೆಯಲು ಆರೋಗ್ಯ ಇಲಾಖೆ ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ. ಈ ಮಧ್ಯೆ, ಕಣ್ಣಿನ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎನ್ನಲಾಗಿದೆ