ದಾರಿ ದೀಪ
ಮನೆಮನೆಗೆ ದಿನಪತ್ರಿಕೆ ಹಂಚುವ ಹಳ್ಳಿಯ ಹುಡುಗ-ಈ ರಾಷ್ಟ್ರದ ರಾಷ್ಟಾಧ್ಯಕ್ಷರಾದ ಅಬ್ದುಲ್ ಕಲಾಂಜೀ,
ಪುಟ್ಟ ಚಹಾ ಅಂಗಡಿಯಲ್ಲಿ ಅಪ್ಪನೊಂದಿಗೆ ರೈಲ್ವೆಸ್ಟೇಷನ್ನಲ್ಲಿ ಚಹಾ ಮಾರುತ್ತಿದ್ದ ಪೋರ ಈ ರಾಷ್ಟ್ರದ ಪ್ರಧಾನಿಯಾದ ನರೇಂದ್ರ ಮೋದಿಜೀ,
ಮುಂಬೈ ಚೌಪಾಟಿ ಕಿನಾರೆಯಲ್ಲಿ ಬೆಲ್ಪುರಿ ತಿಂದು,ಪೆಟ್ರೋಲ್ ಬಂಕ್ನಲ್ಲಿ ವಾಹನಗಳಿಗೆ ಎಣ್ಣೆ ತುಂಬಿಸುವ ಹುಡುಗ ರಿಲೈಯನ್ಸ್ ಎಂಬ ದೈತ್ಯ ಕಂಪನಿಯ ಒಡೆಯನಾದ ಧೀರೂಬಾಯಿ ಅಂಬಾನಿ,
ಹೋಟೇಲ್ನಲ್ಲಿ ಕಪ್ ಬಸಿ ತೊಳೆಯುವ ಮಾಣಿ ವಿಶ್ವದ ಪ್ರತಿಷ್ಟಿತ ಹೋಟೇಲ್ಲಿನ ಮಾಲೀಕನಾದ ರಾವ್ ಬಹದ್ದೂರ್ ಓಬೇರಾಯ್,
ಪುಕ್ಕಟ್ಟೆ ಟ್ಯೂಷನ್ ಹೇಳಿಕೊಡುತ್ತೇನೆಂದು ಪ್ಲೇಕಾರ್ಡ ಮೇಲೆ ಬರೆದುಕೊಂಡು, ಬರ್ನ ನಗರದ ಬೀದಿ ಬೀದಿ ಸುತ್ತಿ ಸುಸ್ತಾಗಿ,ಕೊನೆಗೆ ಹೋಟೇಲ್ನ ಮಾಣಿಯಾಗಿ, ಹೊಟ್ಟೆಹೊರೆದುಕೊಳ್ಳುವ ವ್ಯಕ್ತಿ ಮುಂದೆ ಭೌತಶಾಸ್ತ್ರ ಗಣಿತಶಾಸ್ತ್ರದಲ್ಲಿ ಕ್ರಾಂತಿಮಾಡಿದ ನೋಬೆಲ್ ವಿಜೇತ ಅಲ್ಬರ್ಟ್ ಐನ್ಸ್ಟಿನ್,
ಕತ್ತರಿಸಿದ ಕಾಲಿಗೆ ಕೃತಕ ಕಾಲು ಕಟ್ಟಿಕೊಂಡು ನೃತ್ಯವೈಭವ ಮೆರೆದ ಸುಧಾಚಂದ್ರನ್,
ಕೃತಕ ಕಾಲುಕಟ್ಟಿಕೊಂಡು ಮೌಂಟ್ ಎವರೆಷ್ಟ್ ನೆತ್ತಿಯನ್ನು ಗುದ್ದಿಬಂದ ನ್ಯೂಜಿಲ್ಯಾಂಡಿನ ಮಾರ್ಕ್ ಇಂಗಿಸ್,
ಪೋಲಿಯೋ ಪೀಡಿತೆ,ಹುಟ್ಟಾ ನೃತದೃಷ್ಟೆ,ವಯಸ್ಸು ಒಂಬತ್ತಾದರೂ ನೆಲಕ್ಕೆ ಪಾದವನ್ನೇ ಸ್ಪರ್ಶ ಮಾಡದಾಕೆ,ಅಂಗವೈಕಲ್ಯವನ್ನು ಮೆಟ್ಟಿ ತನ್ನ ಹದಿನೆಂಟನೇಯ ವಯಸ್ಸಿನಲ್ಲಿ ರೋಮ್ ಓಲಂಪಿಕ್ಸ್ನಲ್ಲಿ ನಾಲ್ಕು ಚಿನ್ನದ ಪದಕ ಬಾಚಿದ ಓಟದರಾಣಿ ವಿಲ್ಮಾ ರುಡಾಲ್ಪ,
ಇವರಾರೂ ಏಕಾಏಕಿ,ರಾತ್ರೋರಾತ್ರಿ,ಹಠಾತ್ತನೆ ಯಶಸ್ವಿಗಳಾದವರಲ್ಲ.ಇವರಿಗೆ ಗಾಡ್ ಪಾದರ್ ಗಳಿರಲಿಲ್ಲ,ಅಪ್ಪ ಮಾಡಿದ ಆಸ್ತಿಯ ಗಂಟು ಇರಲಿಲ್ಲ,ಬಡತನ ಕಾಲುಮುರಿದುಕೊಂಡು ಕಂಬಳಿ ಹೊದ್ದುಕೊಂಡು ಮುದುರಿಕೊಂಡು ಮಲಗಿತ್ತು.ಆದರೂ ಯಾವುದಕ್ಕೂ ಕ್ಯಾರೇ ಅನ್ನದೆ ಯಶಸ್ವಿಗಳಾಗಿ ಹೊರಹೊಮ್ಮಿದರು.
ಗಾಡಪಾಧರ್,ದುಡ್ಡು ಸವಲತ್ತು,ನಸೀಬು,ಹಣೆಬರಹ ಚೆನ್ನಾಗಿ ಇದ್ದವರು ಮಾತ್ರ ಯಶಸ್ವಿಗಳಾಗುತ್ತಾರೆ ಎನ್ನುವವರಿಗೆ ಅಪವಾದವಾದರು.ಕಾರಣ ಅವರೊಳಗೆ ಛಲ,ದಿಟ್ಟನಿರ್ಧಾರ,ಆತ್ಮವಿಶ್ವಾಸ,ನಂಬಿಕೆ ಮನೆಮಾಡಿಕೊಂಡಿದ್ದವು.ಇವೊಂದಿಷ್ಟು ಇದ್ದರೆ ಉಳಿದೆಲ್ಲವೂ ನಮ್ಮ ಮನೆಯ ಮುಂದೆ ಬಂದು ‘ಕ್ಯೂ’ ನಿಲ್ಲುತ್ತವೆ ಎಂಬುದು ಚೆನ್ನಾಗಿ ಗೊತ್ತಿತ್ತು.ಅದಕ್ಕಾಗಿಯೇ ಲೀಟರ್ ಗಟ್ಟಲೇ ಬೆವರಿನ ಹನಿ ಹರಿಸಿದ್ದಾರೆ,ಸುರಿಸಿದ್ದಾರೆ.
ವಿರಾಟ್ ಕೊಹ್ಲಿ-ರೋಹಿತ್ ಶರ್ಮಾರ ಬ್ಯಾಟಿನಿಂದ ಸಿಡಿಯುವ ಚೆಂಡು,ಕುಲ್ದೀಪ್ ಯಾದವ್ ಚೈನಾ ಬಾಲಿಂಗೂ,ಜಸ್ಪೀತ್ ಬುಮ್ರಾ ಯಾರ್ಕರ್ ಬಾಲಿಂಗ್ ಸ್ಟೈಲು,
ಜಿಂಕೆಯಂತೆ ಜಿಗಿಯುವ ಸೇರಿನಾ ವಿಲಿಯಮ್ಸ್ ಟೆನ್ನಿಸ್ ಆಟ ಎಷ್ಟೊಂದು ಸಲೀಸು ಸರಳ ಎಂದು ನಮಗೆ ಅನ್ನಿಸಿದರೂ ಅದಕ್ಕಾಗಿ ಅವರು ಸುರಿಸಿದ ಬೆವರು,ಮಾಡಿದ ಕಸರತ್ತು,ತೆತ್ತ ಪರಿಶ್ರಮ ಅಷ್ಟಿಷ್ಟಲ್ಲ,ನಡೆದು ಬಂದ ದಾರಿ,ಬೆನ್ನ ಹಿಂದೆ ಬಿಟ್ಟು ಬಂದ ಹೆಜ್ಜೆ ಗುರುತುಗಳು ಎಷ್ಟು ಕಠಿಣವಾಗಿದ್ದವು ಗೊತ್ತೇ? ನೆನಪಿಸಿಕೊಂಡರೆ ಎದೆ ಝಲ್ಲೆನ್ನುತ್ತದೆ.
ನಾವು ಕೆಲವೊಮ್ಮೆ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಯಂತಾಗಬೇಕು,ಪವರ್ ಸ್ಟಾರ್ ಪುನೀತ್ ರಾಜಕುಮಾರನಂತಾಗಬೇಕು,ಮಹೇಂದ್ರಸಿಂಗ್ ದೋನಿಯಂತಾಗಬೇಕು,ಮಾರ್ಕ್ ಝುಕರಬರ್ಗ್ ನಂತಾಗಬೇಕು,ಹೀಮಾ ದಾಸ್ -ನೀರಜ್ ಚೋಪ್ರಾನಂತಾಗಬೇಕು,ಹೀಗೆ ಅವರಂತಾಗಬೇಕು,ಇವರಂತಾಗಬೇಕು ಎಂದೆಲ್ಲಾ ಹಸಿಹಸಿ ಕನಸುಗಳನ್ನು ಕಾಣುತ್ತೇವೆ.ಆದರೆ ಅವರಂತೆ ಪರಿಶ್ರಮ ಪಡಿ,ಸಾಧನೆಗೆ ಕಾರ್ಯಪೃವೃತ್ತರಾಗಿ ಎಂದರೆ ಎರಡು ಮೂರು ದಿನ ಭಾವೋದ್ವೇಗಕ್ಕೊಳಗಾಗಿ ಎನೋ ಮಾಡುತ್ತೇವೆ,ನಾಲ್ಕನೇಯ ದಿನಕ್ಕೆ ಏನಾದರೊಂದು ನೆಪ ಹೇಳಿಕೊಂಡು ನುಣುಚಿಕೊಂಡು ಬೀಡುತ್ತೇವೆ.ಇದನ್ನು ನೋಡಿಯೇ ಬಸವಣ್ಣನವರು “ಮೊದಲ ದಿನ ಹಣೆ ಮುಟ್ಟಿ ,ಮರುದಿನ ಕೈಮುಟ್ಟಿ,ಮೂರೆಂಬ ದಿನಕ್ಕೆ ತುಕಡಿಕೆ ಕಾಣಿರಣ್ಣ”ಎಂದಿದ್ದಾರೆ.
“ಕೇವಲ ಕನಸು ಕಾಣುವವರೆಲ್ಲ ಯಶಸ್ವಿಗಳಾಗುತ್ತಿದ್ದರೆ ಬೀಕ್ಷೆ ಬೇಡುವವರೆಲ್ಲಾ ಬಿಲ್ಗೆಟ್ಸ್ ಗಳಾಗುತ್ತಿದ್ದರು”.ಅದಕ್ಕಾಗಿ ತಾಲೀಮು ಕಸರತ್ತು ಮಾಡಬೇಕಾಗುತ್ತದೆ.
ಸತ್ಚಿಂತನೆ,ಯಮ-ನಿಯಮಗಳ ಪಾಲನೆ,ಸಮಯ ಗೌರವ,ಸಜ್ಜನರ ಸಂಗ,ಉತ್ತಮಕೃತಿಗಳ ಅಧ್ಯಯನ,ಮಿತ ಮಾತು-ಮಿತನಿದ್ರೆ,ಮಿತಾಹಾರ ನಮ್ಮನ್ನು ಯಶಸ್ವಿಗೊಳಿಸುವ ಕೀಲಿಕೈಗಳಂತೆ ಕಾರ್ಯ ನಿರ್ವಹಿಸುತ್ತವೆ.ನಿತ್ಯ ಯೋಗ,ಪ್ರಾಣಾಯಾಮ,ಧ್ಯಾನ ಮೌನಗಳು ನಮ್ಮೊಳಗಿರುವ ಅಂತಸತ್ವ ಆತ್ಮವಿಶ್ವಾಸವನ್ನು ಜಾಗೃತಗೊಳಿಸುತ್ತವೆ.
ಯಾರೋ ಬಂದು ನಮ್ಮನ್ನು ಉಧ್ದಾರ ಮಾಡುತ್ತಾರೆ,ಬದುಕನ್ನು ಕಟ್ಟಿಕೊಡುತ್ತಾರೆ ಎಂದು ಕೈಕಟ್ಟಿ ಕುಳಿತುಕೊಳ್ಳಬೇಡಿ.ಮತ್ತೊಬ್ಬರ ಬಾಲಬಡಿಯುವ ಬಾಲಂಗೋಚಿಗಳಾಗಿ ಬದುಕಬೇಡಿ.ನಿಮ್ಮೊಳಗೆ ಅದ್ಭುತವಾದ ಶಕ್ತಿ ಸಾಮರ್ಥ್ಯವಿದೆ ಅದನ್ನು ಉದ್ದಿಪನಗೊಳಿಸಿಕೊಳ್ಳಿ,”ನಿಮ್ಮ ಬಾಳಿನ ಶಿಲ್ಪಿ ನೀವೇ “ಎಂಬ ವಿವೇಕಾನಂದರ ವಾಣಿಯಂತೆ,ನಿನಗೆ ನೀ ಮಾಡಿಕೋ ಕೂಡಲಸಂಗಮದೇವಾ”ಎಂಬ ಬಸವಣ್ಣನವರ ವಚನದಂತೆ,ಅಪ್ ದೀಪೋ ಭವ ಅಂದರೆ ನಿಮ್ಮ ಬಾಳಿಗೆ ನೀವೇ ಬೆಳಕಾಗಿ ಎಂಬ ಗೌತಮ ಬುದ್ಧರ ಸಂದೇಶದಂತೆ ಬದುಕೋಣ.
*ಶ್ರೀ ಶ್ರೀ ಶ್ರೀ ಜಗದ್ಗುರು ವಚನಾನಂದ ಸ್ವಾಮೀಜಿ
ಪಂಚಮಸಾಲಿ ಜಗದ್ಗುರು ಪೀಠ,ಹರಿಹರ.