ಮಂಡ್ಯ: ಬಹಳ ವರ್ಷಗಳಿಂದ ಕಾಂಗ್ರೆಸ್-ಬಿಜೆಪಿ ನಡುವೆ ಒಳ ಒಪ್ಪಂದವಿದೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ಮಾತನಾಡಿದ ಅವರು, ಆಪರೇಷನ್ ಕಮಲ ಆದಾಗಿಂದಲೂ ಇದೆಲ್ಲ ನಡೆಯುತ್ತಲೇ ಇದೆ. ಯಾವ ರೀತಿಯ ಒಪ್ಪಂದ ಮಾಡಿಕೊಂಡಿದ್ದಾರೆಂದು ತಿಳಿಯುತ್ತಿದೆ.
ಕಳೆದ ಲೋಕಸಭಾ ಚುನಾವಣೆ ವೇಳೆ ಒಳಒಪ್ಪಂದ ಮಾಡಿಕೊಂಡರು. ಬಿಜೆಪಿ, ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡು JDS ಸೋಲಿಸಿದರು. ಮಂಡ್ಯ ಜಿಲ್ಲೆಯಲ್ಲಿ ಮತ್ತೆ ಕುತಂತ್ರ ರಾಜಕಾರಣಕ್ಕೆ ಮುಂದಾಗಿದ್ದಾರೆ. ಜೆಡಿಎಸ್ ವಿರುದ್ಧ ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷಗಳಿಂದ ಕುತಂತ್ರ ನಡೆಯುತ್ತಿದೆ. ಕಾಂಗ್ರೆಸ್, ಬಿಜೆಪಿ, ರೈತ ಸಂಘ ಒಗ್ಗೂಡಿ ಜಿಲ್ಲೆಯ ಜನತೆಗೆ ದ್ರೋಹ ಮಾಡುತ್ತಿದ್ದಾರೆ.
ಈ ಕುರಿತು ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಜನ ತೀರ್ಮಾನಿಸುತ್ತಾರೆ. ಮೇಲುಕೋಟೆ ಕ್ಷೇತ್ರದಲ್ಲಿ ಏನಾಗಿದೆ ಅಂತಾ ಈಗ ನೋಡುತ್ತಿದ್ದೀರಿ ಅಲ್ವಾ? ಎಲ್ಲಾ ಕ್ಷೇತ್ರದಲ್ಲೂ ಹೆಸರಿಗಾಗಿ ಬಹಿರಂಗವಾಗಿ ಜೆಡಿಎಸ್ ಬಗ್ಗೆ ಮಾತಾಡ್ತಾರೆ. ಲೋಕಸಭಾ ಚುನಾವಣೆ ಸೋಲಿನ ಸೇಡನ್ನು ನಾವು ತೀರಿಸಿಕೊಳ್ಳುತ್ತೇವೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕುತಂತ್ರದ ಫಲಿತಾಂಶವಾಗಿದೆ. ಈ ಬಾರಿ ಮಂಡ್ಯ ಜಿಲ್ಲೆಯ ಜನರು ಆ ಸೇಡನ್ನು ತೀರಿಸಿಕೊಳ್ಳುತ್ತಾರೆ ಎಂದರು.