ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ(Uddhav Thackeray) ಅವರು 11 ತಿಂಗಳ ಹಿಂದೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ ಗುಂಪು ನಡೆಸಿದ ಬೆನ್ನಿಗೆ ಚೂರಿ ಹಾಕುವ ಕೃತ್ಯಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ. ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಸ್ಥಾಪಿಸಿದ್ದ ಶಿವಸೇನಾದ ‘ಭಾರತೀಯ ಕಾಮ್ಗಾರ್ ಸೇನಾ’ದ 55ನೇ ಸಂಸ್ಥಾಪನಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಠಾಕ್ರೆ, ‘ಪ್ರತಿಯೊಬ್ಬರಿಗೂ ಅವರವರ ದಿನಗಳಿವೆ ಆದರೆ ನಮ್ಮ ಒಳ್ಳೆಯ ದಿನಗಳು ಇನ್ನೂ ಬಂದಿಲ್ಲ’ ಎಂದು ಹೇಳಿದರು.
‘ನಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ. ನಾನು ಖಂಡಿತವಾಗಿಯೂ ಅವರಿಗೆ ಅದನ್ನು ಹಿಂತಿರುಗಿಸುತ್ತೇನೆ. ನಾವು ಅವರಿಗೆ ನೀಡುವ ‘ಪ್ರಸಾದ’ವನ್ನು ಅವರು ತಮ್ಮ ಜೀವನದುದ್ದಕ್ಕೂ ನೆನಪಿಸಿಕೊಳ್ಳುತ್ತಾರೆ’ ಎಂದು ಹೇಳಿದರು. ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಂವೇದನೆಯನ್ನೇ ಹೊಂದಿಲ್ಲ. ಅವರು ಕೇವಲ ಕೈಗಾರಿಕೋದ್ಯಮಿಗಳ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ ಮತ್ತು ಕಾರ್ಮಿಕರು ಅಥವಾ ರೈತರ ಬಗ್ಗೆ ಅವರಿಗೆ ಕಾಳಜಿಯಿಲ್ಲ ಎಂದು ಆರೋಪಿಸಿದರು.
ಮೆಗಾ ಯೋಜನೆಗಳನ್ನು ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದ ಆಡಳಿತಾರೂಢ ಶಿವಸೇನೆ ಸಚಿವ ಉದಯ್ ಸಾಮಂತ್ಗೆ ತಿರುಗೇಟು ನೀಡಿದ ಠಾಕ್ರೆ, ಇದಕ್ಕೆ ವಿರುದ್ಧವಾಗಿ, ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ತಾವು ಸಿಎಂ ಆಗಿದ್ದಾಗ, ರಾಜ್ಯವು 2.5 ಲಕ್ಷ ಕೋಟಿ ರೂ. ಮೌಲ್ಯದ ಹೂಡಿಕೆಗಳನ್ನು ಪಡೆದುಕೊಂಡಿತು ಮತ್ತು ಅದರ ಕೈಗಾರಿಕಾ ನೀತಿಗಳು ಇಲ್ಲಿ 25 ದೊಡ್ಡ ಕೈಗಾರಿಕೆಗಳನ್ನು ಆಕರ್ಷಿಸಿದವು ಎಂದರು.