ಬೆಂಗಳೂರು: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಮೂರು ಪ್ರತ್ಯೇಕ ಪಾಲಿಕೆ ವಿಭಜನೆ ಸಂಬಂಧ ಬಿ.ಎಸ್.ಪಾಟೀಲ್ ನೇತೃತ್ವದ ತಜ್ಞರ ಸಮಿತಿ ರಚಿಸಿದ್ದರು. ಈ ಸಮಿತಿಯು ಸರಕಾರಕ್ಕೆ ವರದಿ ಸಲ್ಲಿಸಿತ್ತು. ಆಗ ಬಿಬಿಎಂಪಿ ವಿಭಜನೆಗೆ ಪ್ರತಿಪಕ್ಷಗಳು, ಸಂಘ-ಸಂಸ್ಥೆಗಳು, ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಆನಂತರ ಆ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಇದೀಗ ಕಾಂಗ್ರೆಸ್ ಸರಕಾರವು ಆ ಕುರಿತು ಚಿಂತನೆ ನಡೆಸಿದೆ.
ಬಿಬಿಎಂಪಿ ಚುನಾವಣೆ ಸಂಬಂಧ ಕಾಂಗ್ರೆಸ್ ಪಕ್ಷದ ಮಾಜಿ ಮೇಯರ್ಗಳು, ಆಡಳಿತ ಪಕ್ಷದ ನಾಯಕರು, ಕಾರ್ಪೊರೇಟರ್ಗಳ ನಿಯೋಗವು ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿತು. ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಅಲೆ ಇದ್ದು, ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಜನರಿಗೆ ಪಕ್ಷದ ಮೇಲೆ ವಿಶ್ವಾಸ ಮೂಡಿದೆ. ತಕ್ಷಣವೇ ಪಾಲಿಕೆಗೆ ಚುನಾವಣೆ ನಡೆಸಿದರೆ, ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಮಾಜಿ ಮೇಯರ್ಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ”ಒಬ್ಬರು ಮೇಯರ್, ಮುಖ್ಯ ಆಯುಕ್ತರಿಂದ 1.30 ಕೋಟಿ ಜನರಿರುವ ನಗರದ ಮೇಲ್ವಿಚಾರಣೆ ಅಸಾಧ್ಯ. ಹಾಗಾಗಿ, ಬಿಬಿಎಂಪಿಯನ್ನು ಮೂರು ಪಾಲಿಕೆಗಳನ್ನಾಗಿ ವಿಭಜಿಸುವುದು ಒಳಿತು. ಇವುಗಳಿಗೆ ಡಾ. ಬಿ.ಆರ್.ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ ಮತ್ತು ನಾಡಪ್ರಭು ಕೆಂಪೇಗೌಡ ಮಹಾನಗರ ಪಾಲಿಕೆ ಎಂದು ಹೆಸರಿಡಬಹುದು. ಲೋಕಸಭಾ ಚುನಾವಣೆಗೆ ಮುನ್ನವೇ ಪಾಲಿಕೆಯನ್ನು ವಿಭಜಿಸಿ, ಚುನಾವಣೆ ನಡೆಸಬಹುದು. ಸುಪ್ರೀಂಕೋರ್ಟ್ ತೀರ್ಪು ಆಧರಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ” ಎಂದು ಹೇಳಿದರು. ಆದರೆ, ಇದಕ್ಕೆ ಮಾಜಿ ಮೇಯರ್ಗಳು, ಕಾರ್ಪೊರೇಟರ್ಗಳು ವಿರೋಧ ವ್ಯಕ್ತಪಡಿಸಿದರು. ‘ಇದರಿಂದ ಪಕ್ಷಕ್ಕೆ ಕೆಟ್ಟ ಹೆಸರು ಬರಲಿದೆ. ಚುನಾವಣೆಯೂ ವಿಳಂಬವಾಗಲಿದೆ’ ಎಂದು ತಿಳಿಸಿದರು.
ಬಿಬಿಎಂಪಿ ಕಾಯಿದೆಗೆ ತಿದ್ದುಪಡಿ ಮಾಡಿ 243 ವಾರ್ಡ್ಗಳಿಗೆ ಅಧಿಸೂಚನೆ ಹೊರಡಿಸಿರುವುದರಿಂದ ಅದನ್ನು ಬದಲಿಸುವುದು ಸರಿಯಲ್ಲ. ಆದರೆ, ನ್ಯಾಯಾಲಯವು ಅವಕಾಶ ನೀಡಿದರೆ, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಕೈಬಿಟ್ಟಿರುವ 7 ವಾರ್ಡ್ಗಳನ್ನು ಸೇರಿಸಿ, ವಾರ್ಡ್ಗಳ ಸಂಖ್ಯೆಯನ್ನು 250ಕ್ಕೆ ಹೆಚ್ಚಿಸಬೇಕು ಎಂದು ಶಿಫಾರಸು ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ನಿಯೋಗದಲ್ಲಿಮಾಜಿ ಮೇಯರ್ಗಳಾದ ರಾಮಚಂದ್ರಪ್ಪ, ವೆಂಕಟೇಶಮೂರ್ತಿ, ಜಿ.ಪದ್ಮಾವತಿ, ಸಂಪತ್ರಾಜ್, ಪಿ.ಆರ್.ರಮೇಶ್, ಪಾಲಿಕೆಯ ಆಡಳಿತ ಪಕ್ಷದ ಮಾಜಿ ನಾಯಕರಾದ ಎಂ.ಶಿವರಾಜು, ಆರ್.ಎಸ್.ಸತ್ಯನಾರಾಯಣ, ಅಬ್ದುಲ್ ವಾಜೀದ್ ಹಾಗೂ ಇತರರು ಇದ್ದರು.