ಕರ್ನಾಟಕದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ಬೆಳಗಾವಿ ಜಿಲ್ಲೆಯ ವಿಭಜನೆ ಸನಿಹವಾದಂತೆ ಕಾಣುತ್ತಿದೆ. ಭೌಗೋಳಿಕ ಗಾತ್ರ ಹಾಗೂ ರಾಜಕೀಯ ವಿಚಾರದಲ್ಲೂ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ವಿಭಜನೆಯಾಗುವ ಸಮಯ ಹತ್ತಿರ ಬಂದಿದ್ದು, ಮೂರು ಜಿಲ್ಲೆಗಳಾಗುವ ಸಾಧ್ಯತೆ ಇದೆ. 1997ರಲ್ಲಿಯೇ ಬೆಳಗಾವಿ ಜಿಲ್ಲೆಯನ್ನು ವಿಭಜಿಸಬೇಕೆಂಬ ಬೇಡಿಕೆಯನ್ನು ಮೊದಲ ಬಾರಿಗೆ ಇಡಲಾಗಿತ್ತು. ಆದರೆ, 26 ವರ್ಷಗಳು ಕಳೆದರೂ ಬೇಡಿಕೆ ಮಾತ್ರ ಈಡೇರಿಲ್ಲ.
ಆದರೆ, ಈಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ ವಿಭಜನೆಯ ಸುಳಿವು ನೀಡಿದ್ದಾರೆ. ಈ ಬಗ್ಗೆ ಶೀಘ್ರವೇ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸುತ್ತೇನೆ ಎಂದಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಳ್ಳಾರಿ ವಿಭಜಿಸಿ ವಿಜಯನಗರವನ್ನು ನೂತನ ಜಿಲ್ಲೆಯನ್ನಾಗಿ ಘೋಷಿಸಿದಾಗ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಅವರು ಬೆಳಗಾವಿಯನ್ನು ವಿಭಜಿಸಿ ಎಂದು ಅಭಿಯಾನ ಆರಂಭಿಸಿದ್ದರು. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆ ವಿಭಜನೆ ಸಾಧ್ಯವಾಗಿರಲಿಲ್ಲ.
ಈಗ ಅವರದ್ದೇ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಬೆಳಗಾವಿ ಜಿಲ್ಲೆ ವಿಭಜನೆಯಾಗುವ ಸಾಧ್ಯತೆ ಇದೆ. ಬೆಳಗಾವಿ ಜಿಲ್ಲೆ ಭೌಗೋಳಿಕವಾಗಿ ಬಹಳ ದೊಡ್ಡ ಜಿಲ್ಲೆಯಾಗಿದೆ. 506 ಗ್ರಾಮ ಪಂಚಾಯಿತಿಗಳ ಮೂಲಕ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಗ್ರಾಮ ಪಂಚಾಯಿತಿಗಳನ್ನು ಹೊಂದಿದ ಜಿಲ್ಲೆಯಾಗಿದೆ. 14 ತಾಲೂಕು, 18 ವಿಧಾನಸಭಾ ಕ್ಷೇತ್ರ ಹಾಗೂ ಎರಡೂವರೆ ಲೋಕಸಭಾ ಕ್ಷೇತ್ರ (ಬೆಳಗಾವಿ, ಚಿಕ್ಕೋಡಿ ಹಾಗೂ ಉತ್ತರ ಕನ್ನಡದ ಒಂದಿಷ್ಟು ಭಾಗ), 55 ಲಕ್ಷ ಜನಸಂಖ್ಯೆಯನ್ನು ಹೊಂದಿದೆ.
ಜಿಲ್ಲೆಯ ವಿಭಜನೆಯಿಂದ ಆಡಳಿತ ವ್ಯವಸ್ಥೆ ಜನರಿಗೆ ಇನ್ನು ಹತ್ತಿರವಾಗುತ್ತದೆ, ಹೆಚ್ಚುವರಿ ಅನುದಾನವನ್ನು ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಬಹುದು ಎಂಬುದು ಬೆಳಗಾವಿ ಜಿಲ್ಲೆಯ ವಿಭಜನೆ ಹೋರಾಟಗಾರರ ವಾದವಾಗಿದೆ. ಚಿಕ್ಕೋಡಿ, ಗೋಕಾಕ, ಬೈಲಹೊಂಗಲ, ಹುಕ್ಕೇರಿ, ಅಥಣಿ ಹಾಗೂ ಖಾನಾಪುರ ತಾಲೂಕಿನ ಜನರು ಜಿಲ್ಲಾ ಕೇಂದ್ರ ಬೆಳಗಾವಿಗೆ ಹೋಗಲು 100 ರಿಂದ 200 ಕಿಮೀ ಕ್ರಮಿಸಬೇಕಿದೆ. ಈ ಹಿನ್ನೆಲೆ ಜಿಲ್ಲೆ ವಿಭಜನೆಯಾದರೆ ಜನರಿಗೆ ಅನುಕೂಲ ಆಗಲಿದೆ.
1997ರಲ್ಲಿಯೇ ಚಿಕ್ಕೋಡಿ ಜಿಲ್ಲೆಯ ಶಿಫಾರಸು!
ವಾಸುದೇವ ರಾವ್, ಹುಂಡೇಕರ್ ಮತ್ತು ಪಿಸಿ ಗದ್ದಿಗೌಡರ್ ಸಮಿತಿಗಳು 1997ರಲ್ಲಿ ಚಿಕ್ಕೋಡಿಯನ್ನು ಹೊಸ ಜಿಲ್ಲೆಯನ್ನಾಗಿ ಘೋಷಿಸಲು ಶಿಫಾರಸು ಮಾಡಿದವು. ಆದರೆ, ಕನ್ನಡ ಪರ ಸಂಘಟನೆಗಳಿಂದ ಭಾರೀ ಹೋರಾಟ ನಡೆದ ಹಿನ್ನೆಲೆ ಅಂದಿನ ಮುಖ್ಯಮಂತ್ರಿ ಜೆಎಚ್ ಪಟೇಲ್ ಅವರು ಚಿಕ್ಕೋಡಿಯನ್ನು ಹೊಸ ಜಿಲ್ಲೆಯನ್ನಾಗಿ ಘೋಷಿಸುವ ನಿರ್ಧಾರದಿಂದ ಹಿಂದಕ್ಕೆ ಸರಿದರು.
ಬೆಳಗಾವಿ ಜಿಲ್ಲೆ ವಿಭಜನೆಯಾದರೆ ಮರಾಠಿಗರ ಪ್ರಾಬಲ್ಯ ಹೆಚ್ಚಾಗುತ್ತದೆ ಎಂದು ಜಿಲ್ಲಾ ವಿಭಜನೆಗೆ ಕನ್ನಡ ಪರ ಸಂಘಟನೆಗಳು ಪ್ರತಿರೋಧ ವ್ಯಕ್ತಪಡಿಸಿದ್ದವು. ಆದರೆ, ಈಗ ಕನ್ನಡ ಪರ ಸಂಘಟನೆಗಳು ಜಿಲ್ಲೆಯ ವಿಭಜನೆ ಬಗ್ಗೆ ಮೃದು ಧೋರಣೆ ತಳೆದಿವೆ. ಈ ಬಗ್ಗೆ ಮಾತನಾಡಿರುವ ಕನ್ನಡ ಪರ ಸಂಘಟನೆಗಳ ಕ್ರಿಯಾ ಸಮಿತಿಯ ಸಂಚಾಲಕ ಅಶೋಕ್ ಚಂದರಗಿ, ಬೆಳಗಾವಿ ಜಿಲ್ಲೆಯ ವಿಭಜನೆ ಬಗ್ಗೆ ನಮಗೆ ಯಾವುದೇ ತಕರಾರಿಲ್ಲ. ಆದರೆ, ಕರ್ನಾಟಕದಲ್ಲಿನ ಮರಾಠಿ ಮಾತನಾಡುವ 865 ಹಳ್ಳಿಗಳು ತನಗೆ ಸೇರಿದ್ದು ಎಂದು ಮಹಾರಾಷ್ಟ್ರ ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದೆ. ಸರ್ಕಾರ ಅದರ ಬಗ್ಗೆ ಗಮನ ಹರಿಸಲಿ, ಆ ಪ್ರಕರಣ ಬಗೆಹರಿಯುವವರೆಗೂ ಜಿಲ್ಲೆಯ ವಿಭಜನೆ ಬೇಡ ಎಂದಿದ್ದಾರೆ.
ಇತರ ಜಿಲ್ಲೆಗಳಲ್ಲೂ ಪ್ರತ್ಯೇಕತೆಯ ಕೂಗು!
ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರಸಿಯನ್ನು ಪ್ರತ್ಯೇಕ ಜಿಲ್ಲೆ ಮಾಡಬೇಕೆಂದು ಹೋರಾಟ ಮಾಡಲಾಗುತ್ತಿದೆ. ತುಮಕೂರು ಜಿಲ್ಲೆಯಲ್ಲಿ ಪಾವಗಡ ಮತ್ತು ಮಧುಗಿರಿಯನ್ನು ಪ್ರತ್ಯೇಕ ಜಿಲ್ಲೆ ಮಾಡಬೇಕೆಂಬ ಬೇಡಿಕೆ ಇಡಲಾಗಿದೆ. ಆದರೆ, ಕಂದಾಯ ಇಲಾಖೆ ಅಧಿಕಾರಿಗಳು ಹೊಸ ಜಿಲ್ಲೆಗಳ ಸೃಷ್ಟಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಯಾಕೆಂದರೆ ಹೊಸ ಜಿಲ್ಲೆಗಳು ಉತ್ತಮವಾಗಿ ಕಾರ್ಯನಿರ್ವಹಿಸಲ್ಲ ಎಂಬುದು ಅವರ ದೂರು ಆಗಿದೆ. ಅದರ ಜೊತೆಗೆ ಸರ್ಕಾರಕ್ಕೆ ಆರ್ಥಿಕ ಹೊಡೆತ ಕೂಡ ಬೀಳಲಿದೆ ಎಂಬುದು ಕಂದಾಯ ಇಲಾಖೆಯ ವಾದ.