ಶವಕ್ಕೆ ತಾಳಿಕಟ್ಟಿ ಪ್ರೇಯಸಿಯ ಕೊನೆ ಆಸೆ ಈಡೇರಿಸಿದ ಪ್ರಿಯಕರ..! ಎಲ್ಲಿ ಗೊತ್ತಾ..?

ರಾಷ್ಟ್ರೀಯ

ಅಸ್ಸೋಂಅನಾರೋಗ್ಯದಿಂದ ನಿಧನವಾದ ತನ್ನ ಬಹುಕಾಲದ ಗೆಳತಿಯನ್ನು ಯುವಕನೊಬ್ಬ ವಿವಾಹವಾಗಿದ್ದಾನೆ. ಅಲ್ಲದೇ, ಮತ್ತೆ ಬೇರೆ ಯಾರೊಂದಿಗೂ ಮದುವೆಯಾಗುವುದಿಲ್ಲ ಎಂದು ಮೃತದೇಹದ ಮುಂದೆ ವಾಗ್ದಾನ ಮಾಡಿದ್ದಾನೆ. ಅಸ್ಸೋಂ ಗುವಾಹಟಿಯಲ್ಲಿ ಹೃದಯ ಕಲಕುವ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಇಲ್ಲಿನ ಮೊಯಿರ್‌ಗಾಂವ್ ನಿವಾಸಿ ಬಿಟುಪಾನ್ ತಮುಲಿ ಮತ್ತು ಕೊಸುವಾ ಗ್ರಾಮ ನಿವಾಸಿ ಪ್ರಾರ್ಥನಾ ಬೋರಾ ಇಬ್ಬರು ಬಹು ಕಾಲದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ಬಗ್ಗೆ ಎರಡೂ ಕುಟುಂಬಗಳಿಗೆ ತಿಳಿದಿತ್ತು ಮತ್ತು ಇಬ್ಬರೂ ಮದುವೆಯಾಗುವ ಯೋಚನೆಯನ್ನೂ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಪಾರ್ಥನಾ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿದ್ದಳು. ನಂತರ ಆಕೆಯನ್ನು ಗುವಾಹಟಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಬದುಕಿಸಲು ಸಾಕಷ್ಟು ಪ್ರಯತ್ನಿಸಿದರೂ ಪಾರ್ಥನಾಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಶುಕ್ರವಾರ ಸಂಜೆ ಕೊನೆಯುಸಿರೆಳೆದಳು ಎಂದು ಸಂಬಂಧಿಯಾದ ಸುಭೋನ್ ಬೋರಾ ತಿಳಿಸಿದ್ದಾರೆ.

ಗೆಳೆತಿಯ ಸಾವಿನ ಸುದ್ದಿ ತಿಳಿದ ಬಿಟುಪಾನ್ ತಮುಲಿಯ ದುಃಖ ಕಟ್ಟೆ ಹೊಡೆದಿದೆ. ಇದೇ ದುಃಖದಲ್ಲಿ ಬಿಟುಪಾನ್ ಮದುವೆಯ ಸಾಮಗ್ರಿಗಳೊಂದಿಗೆ ಅಂತ್ಯಕ್ರಿಯೆಗೆ ಬಂದು, ಮೃತ ಗೆಳತಿ ಪ್ರಾರ್ಥನಾಳನ್ನೇ ಮದುವೆಯಾಗುವುದಾಗಿ ಘೋಷಿಸಿದ. ಇದನ್ನು ನಾವ್ಯಾರೂ ಊಹೆ ಕೂಡ ಮಾಡಿರಲಿಲ್ಲ ಎಂದು ಸುಭೋನ್ ಬೋರಾ ಹೇಳಿದ್ದಾರೆ.

ಇಡೀ ಮದುವೆ ಕಾರ್ಯವನ್ನೂ ಬಿಟುಪಾನ್ ಅಳುತ್ತಲೇ ನೆರವೇರಿಸುತ್ತಿದ್ದ. ನನ್ನ ಸಹೋದರಿ ನಿಜವಾಗಿಯೂ ಅದೃಷ್ಟಶಾಲಿಯಾಗಿದ್ದಾಳೆ. ಆಕೆ ಬಿಪುಟಾನ್‌ನ ಮದುವೆ ಆಗಲು ಬಯಸಿದ್ದಳು. ಅವಳ ಕೊನೆಯ ಆಸೆಯನ್ನು ಬಿಟುಪಾನ್​ ಪೂರೈಸಿದ್ದಾನೆ ಎಂದು ಸಂಬಂಧಿ ಬೋರಾ ಮಾಹಿತಿ ನೀಡಿದ್ದಾರೆ.27 ವರ್ಷದ ಬಿಟುಪಾನ್ ನೆಲದ ಮೇಲೆ ಮಲಗಿಸಿದ್ದ ಗೆಳೆತಿಯ ಮೃತದೇಹಕ್ಕೆ ಹಾರವನ್ನು ಹಾಕಿದ್ದಾನೆ. ಮತ್ತೊಂದು ಹಾರವನ್ನು ತೆಗೆದುಕೊಂಡು ಆಕೆಯ ದೇಹದ ಭಾಗಗಳನ್ನು ಮುಟ್ಟಿಸಿ, ನಂತರ ಅದನ್ನು ತಾನೇ ಧರಿಸಿದ್ದಾನೆ. ಜೊತೆಗೆ ಹಣೆ ಮತ್ತು ಕೆನ್ನೆಯ ಮೇಲೆ ಸಿಂಧೂರವನ್ನು ಹಚ್ಚುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.