ಮರಾವತಿ: ಸೆಲ್ಫಿ ನೆಪದಲ್ಲಿ ಮಹಿಳೆ, 1 ವರ್ಷ ಹಾಗೂ 13 ವರ್ಷದ ಮಕ್ಕಳನ್ನು ಮಹಿಳೆಯ ಲಿವ್ ಇನ್ ಪಾರ್ಟ್ನರ್ ತುಂಬಿ ಹರಿಯುತ್ತಿದ್ದ ನದಿಯ ಸೇತುವೆಯಿಂದ ತಳ್ಳಿದ್ದು, ಘಟನೆಯಲ್ಲಿ 13ರ ಬಾಲಕಿ ಪವಾಡಸದೃಶದಂತೆ ತನ್ನ ಪ್ರಾಣ ಉಳಿಸಿಕೊಂಡಿರುವ ಘಟನೆ ಆಂಧ್ರಪ್ರದೇಶದ (Andhra Pradesh) ಗುಂಟೂರಿನಲ್ಲಿ (Guntur) ನಡೆದಿದೆ.
13 ವರ್ಷದ ಬಾಲಕಿ ಕೀರ್ತನ, ತನ್ನ ತಾಯಿ ಪುಪ್ಪಳ ಸುಹಾಸಿನಿ (36) ಹಾಗೂ ಬಾಲಕಿಯ 1 ವರ್ಷದ ಸಹೋದರಿ ಜರ್ಸಿಯನ್ನು ಭಾನುವಾರ ಮುಂಜಾನೆ ಗೋದಾವರಿ ನದಿಗೆ (Godavari River) ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆಯಿಂದ (Bridge) ತಳ್ಳಲಾಗಿತ್ತು. ಬಾಲಕಿ ಈ ವೇಳೆ ಸೇತುವೆಗೆ ಅಳವಡಿಸಲಾಗಿದ್ದ ಪ್ಲಾಸ್ಟಿಕ್ ಪೈಪ್ ಅನ್ನು ಬಿಗಿಯಾಗಿ ಹಿಡಿದು, ಪೊಲೀಸರ ಸಹಾಯಕ್ಕಾಗಿ ತನ್ನ ಜೇಬಿನಿಂದ ಫೋನ್ ತೆಗೆದುಕೊಂಡು 100ಕ್ಕೆ ಕರೆ ಮಾಡಿದ್ದಾಳೆ.
ಮಹಿಳೆ ಹಾಗೂ ಮಕ್ಕಳನ್ನು ಸೇತುವೆಗೆ ತಳ್ಳಿದ ಆರೋಪಿ ಉಳವ ಸುರೇಶ್ ಸುಹಾಸಿನಿಯ ಲಿವ್ ಇನ್ ಪಾರ್ಟ್ನರ್ ಆಗಿದ್ದ. ಗಂಡನಿಂದ ದೂರವಾಗಿದ್ದ ಸುಹಾಸಿನಿಗೆ ಸುರೇಶ್ ಪರಿಚಯವಾಗಿತ್ತು. ಹೀಗೆ ಸುರೇಶ್ ಹಾಗೂ ಸುಹಾಸಿನಿ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದರು.
ಭಾನುವಾರ ಇಬ್ಬರು ಮಕ್ಕಳು ಹಾಗೂ ಸುಹಾಸಿನಿಯನ್ನು ಸುರೇಶ್ ಪಿಕ್ನಿಕ್ ಕರೆದುಕೊಂಡು ಹೋಗಿದ್ದ ಮಾತ್ರವಲ್ಲದೇ ಗೆಳತಿ ಹಾಗೂ ಆಕೆಯ ಮಕ್ಕಳನ್ನು ಕೊಲ್ಲುವ ಸಂಚು ರೂಪಿಸಿದ್ದ. ಸೆಲ್ಫಿ ನೆಪದಲ್ಲಿ ಗೋದಾವರಿ ನದಿ ಬಳಿ ಕಾರು ನಿಲ್ಲಿಸಿ, ಮೂವರನ್ನು ಸೇತುವೆ ಅಂಚಿಗೆ ಕರೆದುಕೊಂಡು ಹೋಗಿ ನದಿಗೆ ತಳ್ಳಿದ್ದಾನೆ.
ಆದರೆ ಬಾಲಕಿ ಕೀರ್ತನ ಈ ವೇಳೆ ಸೇತುವೆಗೆ ಅಳವಡಿಸಲಾಗಿದ್ದ ಪೈಪ್ ಅನ್ನು ಗಟ್ಟಿಯಾಗಿ ಹಿಡಿದು ತನ್ನ ಪ್ರಾಣ ಉಳಿಸಿಕೊಂಡಿದ್ದಾಳೆ. ತಕ್ಷಣ ತನ್ನ ಜೇಬಿನಿಂದ ಫೋನ್ ತೆಗೆದು ಸಹಾಯಕ್ಕಾಗಿ 100 ನಂಬರ್ ಅನ್ನು ಡಯಲ್ ಮಾಡಿದ್ದಾಳೆ. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಬಾಲಕಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸುಹಾಸಿನಿ ಹಾಗೂ ಆಕೆಯ 1 ವರ್ಷದ ಮಗು ನದಿಯಲ್ಲಿ ನಾಪತ್ತೆಯಾಗಿದೆ. ಇದೀಗ ನಾಪತ್ತೆಯಾಗಿರುವ ಸುಹಾಸಿನಿ ಹಾಗೂ ಮಗುವನ್ನು ಹುಡುಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಇತ್ತ ತಲೆಮರೆಸಿಕೊಂಡಿರುವ ಆರೋಪಿ ಸುರೇಶ್ನನ್ನು ಬಂಧಿಸಲು ಬಲೆಬೀಸಿದ್ದಾರೆ.