ಬೆಂಗಳೂರು, ಡಿಸೆಂಬರ್ 28: ಕನ್ನಡ ನೆಲ, ಜಲ, ರಕ್ಷಣೆ ವಿಚಾರದಲ್ಲಿ ಎಂದಿಗೂ ರಾಜಿ ಇಲ್ಲ. ಶೇಕಡಾ. 60 ರಷ್ಟು ಕನ್ನಡ ಕಡ್ಡಾಯ ಬಳಕೆ ಮಾಡದ ಉದ್ದಿಮೆಗಳ ವಿರುದ್ಧ ದಂಡ ವಿಧಿಸುವ ಜೊತೆಗೆ ಪರವಾನಿಗೆ ರದ್ದು ಮಾಡುವ ಕಾನೂನನ್ನು ಜಾರಿಗೊಳಿಸಲು ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕಕ್ಕೆ ತಿದ್ದುಪಡಿ ತರಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸರ್ಕಾರ ಕನ್ನಡ ರಕ್ಷಣೆ, ಭಾಷೆ ಪರವಾಗಿದೆ. ಉದ್ದಿಮೆಗಳ ನಾಮಫಲಕದಲ್ಲಿ ಶೇಕಡಾ 60 ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು. ಈ ಸಂಬಂಧ ಕಠಿಣ ಕ್ರಮ ರೂಪಿಸಬೇಕಿದೆ. ಇದಕ್ಕಾಗಿ ಶಿಕ್ಷಣ ಇಲಾಖೆ ಮತ್ತು ಗೃಹ ಇಲಾಖೆ ಜೊತೆಗೆ ಚರ್ಚಿಸಿ ಕ್ರಮ ಜಾರಿಗೊಳಿಸಬೇಕು.
ನಾಮಫಲಕಗಳಲ್ಲಿ ಶೇಕಡಾ 60 ರಷ್ಟು ಕನ್ನಡ ಕಡ್ಡಾಯ ಬಳಕೆಗೆ ಸೂಕ್ತ ಕ್ರಮ ಕೈಗೊಳ್ಳುವ ಸಲುವಾಗಿ ‘ಕನ್ನಡ ಭಾಷಾ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕ’ ಮಸೂದೆ ತಿದ್ದುಪಡಿ ಕುರಿತು ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದರು.
ಕನ್ನಡ ನಾಮಫಲಕಗಳ ಅಳವಡಿಕೆಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ಕಾರ್ಯಪಡೆ ರಚಿಸುವ ಕುರಿತು ಯೋಚನೆ ಇದೆ. ಕೆಲ ಶಿಕ್ಷಣ ಸಂಸ್ಥೆಗಳು ಉದ್ದೇಶಪೂರ್ವಕವಾಗಿ ನಾಮಫಲಕದಲ್ಲಿ ಕನ್ನಡ ಅಳವಡಿಕೆ ಮಾಡದಿರುವುದು ಗಮನಕ್ಕೆ ಬಂದಿದೆ.
ಬೆಂಗಳೂರಿನಲ್ಲಿ ಶಾಪಿಂಗ್ ಮಳಿಗೆಗಳಲ್ಲಿ ಕನ್ನಡ ಬಳಕೆ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಹೋರಾಟಕ್ಕೆ ನಮ್ಮ ಬೆಂಬಲ ವಿದೆ. ಆದರೆ ಪ್ರತಿಭಟನೆ ನೆಪದಲ್ಲಿ ಕಲ್ಲು ಎಸೆಯುವುದನ್ನೆಲ್ಲ ಮಾಡಬಾರು. ಕಾನೂನು ಕೈಗೆತ್ತಿಕೊಳ್ಳಬಾರದು. ಎಲ್ಲಾ ವಾಣಿಜ್ಯ ಸಂಸ್ಥೆಗಳು ಶೇ 60 ರಷ್ಟು ಸೂಚನಾ ಫಲಕಗಳು ಕನ್ನಡದಲ್ಲೇ ಇರಬೇಕು ಎಂಬ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿಗೆ ತರಲಾಗುವುದು ಎಂದು ಪುನರುಚ್ಚರಿಸಿದರು