ಬೆಂಗಳೂರು, ಡಿಸೆಂಬರ್ 28; ಉದ್ಯಾನ ನಗರಿ ಬೆಂಗಳೂರಿನಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಪಾರ್ಟಿ ಮುಗಿಸಿ ತೆರಳುವ ಜನರಿಗಾಗಿಯೇ ಬಿಎಂಟಿಸಿ ಡಿಸೆಂಬರ್ 31ರಂದು ವಿಶೇಷ ಬಸ್ಗಳನ್ನು ಓಡಿಸುತ್ತಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಎಂ. ಜಿ. ರಸ್ತೆ/ ಬ್ರಿಗೇಡ್ ರಸ್ತೆಯಿಂದ ವಿವಿಧ ಪ್ರದೇಶಗಳಿಗೆ ಈ ವಿಶೇಷ ಬಸ್ಗಳು ಸಂಚಾರ ನಡೆಸಲಿವೆ. ಡಿಸೆಂಬರ್ 31ರ ರಾತ್ರಿ 11 ಗಂಟೆಯಿಂದ ಜನವರಿ 1ರ 2 ಗಂಟೆಯ ತನಕ ಬಸ್ಗಳು ಸಂಚಾರ ನಡೆಸಲಿವೆ.
ಬಿಎಂಟಿಸಿ ಡಿಸೆಂಬರ್ 31ರಂದು ಎಂ. ಜಿ. ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಭಾಗವಹಿಸುವ ಜನರಿಗೆ ಅನುಕೂಲವಾಗುವಂತೆ ಬೇಡಿಕೆಗೆ ಅನುಗುಣವಾಗಿ ಬಿಎಂಟಿಸಿ ವಿಶೇಷ ಬಸ್ಗಳನ್ನು ಓಡಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪೊಲೀಸರಿಂದಲೂ ಸಿದ್ಧತೆ; ಬೆಂಗಳೂರು ನಗರ ಪೊಲೀಸರು ಸಹ ಡಿಸೆಂಬರ್ 31ರ ರಾತ್ರಿ ನಗರದಲ್ಲಿ ನಡೆಯುವ ಹೊಸ ವರ್ಷದ ಸಂಭ್ರಮಕ್ಕೆ ಅಗತ್ಯ ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಪ್ರಮುಖವಾಗಿ ನಗರದ ಎಂ. ಜಿ. ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ಕಬ್ಬನ್ಪಾರ್ಕ್, ಟ್ರಿನಿಟಿ ಸರ್ಕಲ್, ಫೀನಿಕ್ಸ್ ಮಾಲ್ ಹಾಗೂ ಇತರೆ ಪ್ರಮುಖ ಸ್ಥಳಗಳಲ್ಲಿ ಜನರು ಗುಂಪು ಸೇರಿ 2024ನೇ ಹೊಸ ವರ್ಷವನ್ನು ಆಚರಿಸುತ್ತಾರೆ. ಆದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದಾರೆ. ಉಪ ಪೊಲೀಸ್ ಆಯುಕ್ತರುಗಳು ತಮ್ಮ ಅಧೀನದ ಎಲ್ಲಾ ಪೊಲೀಸ್ ಠಾಣೆಗಳಿಗೆ ಇಲಾಖಾ ವತಿಯಿಂದ ಹಂಚಿಕೆಯಾಗಿರುವ ಎಲ್ಲಾ ದ್ವಿ-ಚಕ್ರ ವಾಹನಗಳನ್ನು ಮೊಬೈಲ್ ಪೆಟ್ರೋಲಿಂಗ್ ವಾಹನಗಳನ್ನಾಗಿ ಉಪಯೋಗಿಸಿ ಸೂಕ್ತ ಗಸ್ತು ನಿರ್ವಹಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಉಪ ಪೊಲೀಸ್ ಆಯುಕ್ತರುಗಳು ಹೊಸ ವರ್ಷಾಚರಣೆ ಬಂದೋಬಸ್ತ್ ಯೋಜನೆಯಲ್ಲಿ ಸೆಕ್ಟರ್ ವೈಸ್ ಬಂದೋಬಸ್ತ್ ಮತ್ತು ಸೆಕ್ಟರ್ ಮೊಬೈಲ್ಗಳನ್ನು ಕರ್ತವ್ಯಕ್ಕೆ ನಿಯೋಜಿಸಿ, ಅವುಗಳಿಗೆ ನಿಗದಿತ ಸಮಯ ಹಾಗೂ ನಿಗದಿತ ರೂಟ್ ಅನ್ನು ಕೊಟ್ಟು, ಸೆಕ್ಟರ್ ಪೆಟ್ರೋಲಿಂಗ್ ಅನ್ನು ವ್ಯವಸ್ಥಿತವಾಗಿ ಏರ್ಪಡಿಸಲು ತಿಳಿಸಲಾಗಿದೆ. ಹೊಸ ವರ್ಷಾಚರಣೆಯನ್ನು ವಿರೋಧಿಸುವ ಸಂಘ ಸಂಸ್ಥೆಗಳ ಬಗ್ಗೆ ಮುಂಗಡವಾಗಿ ಮಾಹಿತಿ ಸಂಗ್ರಹಿಸಿ ಅಂತಹ ಸಂಘ ಸಂಸ್ಥೆಗಳ ಚಲನವಲನಗಳ ಬಗ್ಗೆ ಗುಪ್ತ ಮಾಹಿತಿ ಸಂಗ್ರಹಿಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ. ಉಪ ಪೊಲೀಸ್ ಆಯುಕ್ತರುಗಳು ಎಲ್ಲಾ ಮಾಲ್ಗಳ ವ್ಯವಸ್ಥಾಪಕರಿಗೆ ಲಿಖಿತವಾದ ಸೂಚನೆ ನೀಡಿ, ಅವರುಗಳು ಮಾಲ್ಗಳಿಗೆ ಒಳಬರುವ ವ್ಯಕ್ತಿಗಳ ವೈಯಕ್ತಿಕ ಶೋಧನೆ ಹಾಗೂ ಅವರುಗಳ ಬ್ಯಾಗೇಜುಗಳ ಪರಿಶೀಲನೆಯನ್ನು ಮಾಡುವ ಅಗತ್ಯತೆ ಬಗ್ಗೆ ಮತ್ತೊಮ್ಮೆ ತಿಳಿಸಬೇಕು. ಮಾಲ್ಗಳಲ್ಲಿ ಅಳವಡಿಸಿರುವ ಸಿಸಿಟಿವಿ ಸುಸ್ಥಿತಿಯಲ್ಲಿರುವ ಬಗ್ಗೆ, ಮಾಲ್ಗಳಿಗೆ ಆಗಮಿಸುವ ವಾಹನಗಳನ್ನೂ ಸಹ ಸೂಕ್ತವಾಗಿ ಪರಿಶೀಲಿಸಿದ ನಂತರ ಒಳಪ್ರವೇಶಿಸಲು ಅನುಮತಿ ನೀಡುವ ಬಗ್ಗೆ ಸಂಬಂಧಪಟ್ಟ ಮಾಲ್ಗಳ ಮಾಲೀಕರುಗಳಿಗೆ ಸೂಕ್ತ ತಿಳುವಳಿಕೆ ನೀಡಬೇಕಿದೆ. ದಿನಾಂಕ 31/12/2023ರಂದು ರಾತ್ರಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಂಡು ಮೇಲುಸ್ತುವಾರಿ ವಹಿಸಬೇಕು. ಬಂದೋಬಸ್ತ್ಗೆ ನೇಮಕವಾದ ಸಿಬ್ಬಂದಿಗಳು ಮೇಲಾಧಿಕಾರಿಗಳ ಆದೇಶವಿಲ್ಲದೆ ಸ್ಥಳವನ್ನು ಬಿಡಬಾರದು ಎಂದು ಸೂಚನೆ ಕೊಡಲಾಗಿದೆ.