ಬೆಂಗಳೂರು: ಜಾತಿ ಜನಗಣತಿ ವರದಿಯನ್ನು ಮುಂದಿನ ಬಾರಿ ಕ್ಯಾಬಿನೆಟ್ನಲ್ಲಿ ಚರ್ಚೆಗೆ ತರಲಾಗುವುದು. ಕ್ಯಾಬಿನೆಟ್ನಲ್ಲಿ ಚರ್ಚೆ ಆದಮೇಲೆ ನೋಡೋಣ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ಜಾರಿಯಿಂದ ಸರ್ಕಾರ ಹೋಗುತ್ತೆ ಅನ್ನೋದಾದ್ರೆ ಹೋಗಲಿ ಎಂಬ ಕಾಂಗ್ರೆಸ್ನ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಯಾವಾಗಲೂ ಕೇಂದ್ರ ಸರ್ಕಾರದ ಜನಗಣತಿಯನ್ನೇ ಎಲ್ಲರೂ ಪರಿಗಣಿಸುತ್ತಾರೆ. ಒಂದು ಸಾರಿ ಕ್ಯಾಬಿನೆಟ್ನಲ್ಲಿ ಚರ್ಚೆಯಾಗಲಿ. ಆಮೇಲೆ ನೋಡೋಣ. ರಾಜ್ಯ ಸರ್ಕಾರ 160 ಕೋಟಿ ರೂ. ಖರ್ಚು ಮಾಡಿದೆ, ಅದಕ್ಕೂ ಲೆಕ್ಕ ಕೊಡಬೇಕು. ನಾಳೆ ಸಿಎಜಿ ಕೂಡ ಇದಕ್ಕೆ ಆಕ್ಷೇಪ ಮಾಡಬಹುದು. ಹೀಗಾಗಿ ರಾಜ್ಯದ ಜನಗಣತಿ ಕ್ಯಾಬಿನೆಟ್ಗೆ ತರುತ್ತೇವೆ ಎಂದಿದ್ದಾರೆ.
ಜನಗಣತಿ ಸ್ವೀಕಾರ ವಿಳಂಬಕ್ಕೂ ಕಾರಣಗಳಿವೆ. ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡಿ ಅಸೆಂಬ್ಲಿಗೆ ತರಬೇಕಾ? ಬೇಡವಾ? ಎನ್ನುವುದನ್ನು ಕ್ಯಾಬಿನೆಟ್ನಲ್ಲಿ ತೀರ್ಮಾನ ಮಾಡಲಾಗುವುದು. ಆದರೆ ಇದೊಂದು ವಿಚಿತ್ರ ಸಂದರ್ಭ ಜಾತಿ ಜನಗಣತಿ ಸ್ವೀಕಾರ ಮಾಡಿಲ್ಲ ಅಂದರೆ ಮಾಡಿಲ್ಲ ಅಂತಾರೆ, ಮಾಡಿದ್ರೆ ಯಾಕೆ ಈಗ ಮಾಡುತ್ತೀರಿ? ಎಂದು ವ್ಯಾಖ್ಯಾನ ಮಾಡುತ್ತಾರೆ. ಅಸೆಂಬ್ಲಿಗೆ ಬೇಕಾಗಿಲ್ಲ ಎಂದು ತೀರ್ಮಾನ ಮಾಡಿದರೆ ಮುಗಿಯಿತು. ಜನಗಣತಿ ಕೂಡ ಆಗಲಿ. ಓವರ್ ಲ್ಯಾಪ್ ಆಗಿದ್ದರೆ ಮುಂದೆ ಸರಿಪಡಿಸಿಕೊಳ್ಳಬಹುದು. ಯಾವುದಾದರೂ ಸಮುದಾಯದ ಅಂಕಿಸಂಖ್ಯೆ ಹೆಚ್ಚು ಕಮ್ಮಿ ಆಗಿದ್ದರೆ ಆಮೇಲೆ ಸರಿ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಹೈಕಮಾಂಡ್ ರಾಜ್ಯದ ಪ್ರತಿ ಬೆಳವಣಿಗೆ ಕುರಿತು ಮಾಹಿತಿ ಪಡೆಯುತ್ತಿರುವ ವಿಚಾರವಾಗಿ ಮಾತನಾಡಿ, ಅಧ್ಯಕ್ಷರಿಗೆ, ಎಐಸಿಸಿ ನಾಯಕರಿಗೆ ನೇರ ಸಂಪರ್ಕ ಇರುತ್ತದೆ. ಹೈಕಮಾಂಡ್ ಮಾಹಿತಿ ಕಲೆ ಹಾಕುತ್ತಿರುತ್ತದೆ. ಸರ್ಕಾರ ಯಾವ ರೀತಿ ನಡೆಯುತ್ತಿದೆ ಎಂಬುದರ ಮಾಹಿತಿ ಪಡೆಯುತ್ತಿರುತ್ತದೆ. ಗೃಹ ಸಚಿವನಾಗಿ ನನಗೂ ಮಾಹಿತಿ ಬರುತ್ತದೆ. ರಹಸ್ಯವಾಗಿ ಯಾರೂ ಏನೂ ಮಾಡುತ್ತಿಲ್ಲ. ರಾಜಕೀಯವಾದ ಯಾವುದೇ ಗುಂಪುಗಾರಿಕೆ ಆಗುತ್ತಿಲ್ಲ. ನಾನು ಮಹದೇವಪ್ಪ ಮನೆಗೆ ಹೋಗಿದ್ದೆ. ಆದರೆ ರಹಸ್ಯವಾದ ಚರ್ಚೆ ಮಾಡುವಂಥದ್ದು ಏನೂ ಇರಲಿಲ್ಲ ಎಂದಿದ್ದಾರೆ.
ಇದೇ ವೇಳೆ ಅಹಿಂದ ನಾಯಕ ಎಂಬ ಕಾರಣಕ್ಕೆ ಸಿಎಂ ಟಾರ್ಗೆಟ್ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯಗೆ ಕೆಲವೊಂದು ಮಾಹಿತಿ ಇದ್ದೇ ಹೀಗೆ ಹೇಳಿರಬಹುದು. ಈ ಫ್ಯಾಕ್ಟರ್ ಕೂಡ ಇರಬಹುದು. ಸಿದ್ದರಾಮಯ್ಯ ಹೇಳಿದ್ದರಲ್ಲಿ ತಪ್ಪು ಏನಿದೆ..? ಸಮಾಜ ಯಾವ ರೀತಿ ನಡೆದುಕೊಳ್ಳುತ್ತಿದೆ ನೋಡುತ್ತಿದ್ದೇವೆ. ಅದನ್ನು ಗಮನಿಸಿಯೇ ಸಿದ್ದರಾಮಯ್ಯ ಹೇಳಿರಬಹುದು ಎಂದು ತಿಳಿಸಿದ್ದಾರೆ.
ತನ್ನ ಸರ್ಕಾರದ ಅಭಿವೃದ್ಧಿಯೇ ಉತ್ತಮವಾಗಿತ್ತು ಎಂಬ ಹೆಚ್ಡಿಕೆ ವಿಚಾರವಾಗಿ ಮಾತನಾಡಿ, 14 ತಿಂಗಳ ಆಡಳಿತದಲ್ಲಿ ನಾನೂ ಅವರ ಜೊತೆಗೆ ಇದ್ದೆ. ಕ್ರೆಡಿಟ್, ಡಿಸ್ಕ್ರೆಡಿಟ್ ಎರಡೂ ನಮಗೂ ಸೇರಬೇಕೆಂದಿದ್ದಾರೆ.