ಬೆಂಗಳೂರು:- ನಾಗಸಂದ್ರ ಮಾದಾವರ ಮಾರ್ಗ ಕೊನೆಗೂ ಕಾರ್ಯಾಚರಣೆಗೆ ಸಿದ್ಧವಾಗಿದ್ದು, ಈ ಮೂಲಕ ಮೆಟ್ರೋ ಪ್ರಯಾಣಿಕರು ಖುಷ್ ಆಗಿದ್ದಾರೆ.
3.14 ಕಿಮೀ ಮಾರ್ಗದಲ್ಲಿ ನಾಗಸಂದ್ರದಿಂದ ಮಾದಾವರ ನಡುವೆ ಮೂರು ನಿಲ್ದಾಣಗಳಿದ್ದು, ಮಂಜುನಾಥ ನಗರ, ಚಿಕ್ಕಬಿದರಕಲ್ಲು, ಮಾದಾವರ ಹೊಸದಾಗಿ ಹಸಿರು ಮಾರ್ಗಕ್ಕೆ ಸೇರ್ಪಡೆಯಾಗಲಿದೆ.
ಒಂದು ವಾರದೊಳಗೆ ಉದ್ಘಾಟನಾ ಸಮಾರಂಭ ನಡೆಯುವ ನಿರೀಕ್ಷೆ ಇದೆ.
ಏಷ್ಯಾದ ಅತಿ ದೊಡ್ಡ ಪ್ರದರ್ಶನ ಆಯೋಜಿಸುವ ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ ಬಲಭಾಗಕ್ಕೆ ಚಿಕ್ಕ ಬಿದರಕಲ್ಲು ನಿಲ್ದಾಣವಿದೆ. ಈ ಮಾರ್ಗ ಪೂರ್ಣಗೊಳ್ಳುವುದರಿಂದ ನೆಲಮಂಗಲ, ಮಾದನಾಯಕನಹಳ್ಳಿ, ಮಾಕಳಿ ನಿವಾಸಿಗಳಿಗೆ, ನಾಗಸಂದ್ರ-ಮಾದಾವರ ಮಾರ್ಗದ ಮೂರು ನಿಲ್ದಾಣಗಳ ಸಮೀಪದ ಅಪಾಟ್ಮೆಂಟ್ಗಳ ನಿವಾಸಿಗಳು ಮತ್ತು ಸುತ್ತ ಮುತ್ತಲಿನ ನಿವಾಸಿಗಳಿಗೆ ಸಹಾಯ ಆಗಲಿದೆ.
ಈಗಾಗಲೇ ಮೂರು ಮೆಟ್ರೋ ಸ್ಟೇಷನ್ಗಳು ಉದ್ಘಾಟನೆಗೆ ಸಿದ್ದವಾಗಿದ್ದು ಸಿವಿಲ್, ಪೇಂಟಿಂಗ್, ಸ್ಟೇಷನ್ ಕೆಲಸ ಸೇರಿದಂತೆ ಎಲ್ಲವೂ ಮುಗಿದಿದೆ. ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯಲಾಗುತ್ತಿದೆ. ಕೇಂದ್ರ ಸರ್ಕಾರ ಗ್ರೀನ್ ಕೊಟ್ಟಿದ್ದೇ ಆದಲ್ಲಿ ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಮಾಡಲಿದೆ.
ಒಟ್ಟಿನಲ್ಲಿ ಈ ಮಾರ್ಗದ ಮೆಟ್ರೋಗೆ ಈಗಾಗಲೇ ರೈಲ್ವೆ ಸುರಕ್ಷತಾ ಆಯುಕ್ತರು ಅನುಮತಿ ನೀಡಿದ್ದಾರೆ. ಆದರೆ, ರಾಜ್ಯ ಸರ್ಕಾರ ಕೇಂದ್ರದ ಅನುಮತಿಗೆ ಪತ್ರ ಬರೆದಿದ್ದು, ಗ್ರೀನ್ ಸಿಗ್ನಲ್ಗಾಗಿ ಕಾಯುತ್ತಿದೆ.