ಬೆಂಗಳೂರು:- ಚುನಾವಣಾ ಆಯೋಗದಿಂದ ಬೆಂಗಳೂರು ಗ್ರಾಮಾಂತರ ಅತಿಸೂಕ್ಷ್ಮ ಕ್ಷೇತ್ರ ಎಂದು ಘೋಷಣೆ ಮಾಡಲಾಗಿದ್ದು, ಹೆಚ್ಚಿನ ಭದ್ರತೆ ವಹಿಸಲು ಆದೇಶ ಹೊರಡಿಸಲಾಗಿದೆ.
ಕ್ಷೇತ್ರದಲ್ಲಿ ಪ್ರಬಲರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ, ಈ ಹಿನ್ನೆಲೆಯಲ್ಲಿ ಅತಿಸೂಕ್ಷ್ಮ ಕ್ಷೇತ್ರ ಅಂತ ಪರಿಗಣಿಸಲು ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಏಜೆಂಟ್ ಆಗಿರುವ ಪದ್ಮನಾಭ್ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಚುನಾವಣಾ ಆಯೋಗ ಮಹತ್ವದ ಆದೇಶ ಹೊರಡಿಸಿದ್ದು, ಸದರಿ ಪತ್ರವನ್ನ ರಾಮನಗರ ಜಿಲ್ಲಾಧಿಕಾರಿಗೆ ರವಾನೆ ಮಾಡಲಾಗಿದೆ.
ಏಪ್ರಿಲ್ 10ರಂದು ರಾಜ್ಯ ಬಿಜೆಪಿ, ಚುನಾವಣಾ ಆಯೋಗಕ್ಕೆ ಪತ್ರ ಬರೆದು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನ್ಯಾಯಸಮ್ಮತ ಚುನಾವಣೆಗಾಗಿ ಹೆಚ್ಚು ಅರೆಸೇನಾ ಪಡೆ ನಿಯೋಜನೆ ಮಾಡಲು ಮನವಿ ಮಾಡಿತ್ತು. ಇದರ ಬೆನಲ್ಲೇ ಪದ್ಮನಾಭ್ ಅವರು ಕೂಡ ಏಪ್ರಿಲ್ 06ರಂದು ಪತ್ರ ಬರೆದು ಮನವಿ ಮಾಡಿದ್ದರು. ಈ ಹಿನ್ನೆಲೆ ಕ್ಷೇತ್ರದಲ್ಲಿ ಹೆಚ್ಚಿನ ಭದ್ರತೆ ವಹಿಸಲು ಚುನಾವಣಾ ಆಯೋಗ ಆದೇಶ ನೀಡಿದೆ
ಅಂದಹಾಗೇ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಸಂಸದ, ಡಿಸಿಎಂ ಡಿಕೆ ಶಿವಕುಮಾರ್ ಅವರ ಸಹೋದರ ಡಿಕೆ ಸುರೇಶ್ ಸ್ಪರ್ಧೆ ಮಾಡಿದ್ದಾರೆ. ಇತ್ತ ಎನ್ಡಿಎ ಅಭ್ಯರ್ಥಿಯಾಗಿ ಡಾ ಸಿಎನ್ ಮಂಜುನಾಥ್ ಅವರು ಕಣಕ್ಕೆ ಇಳಿದಿದ್ದಾರೆ