ಬೆಂಗಳೂರು:- ಕಳೆದ ಒಂದು ವಾರದ ಹಿಂದೆ ಕೆಜಿಗೆ 40 ರೂ. ಇದ್ದ ದರ ಈಗ ಎರಡು ಪಟ್ಟು ಹೆಚ್ಚಳವಾಗಿದೆ. ಶುಕ್ರವಾರದಿಂದ ಕೆಜಿಗೆ 80 ರೂ. ದರದಲ್ಲಿ ಟೊಮೆಟೊ ಮಾರಾಟವಾಗುತ್ತಿದೆ.
ಜನಸಾಮಾನ್ಯನಿಗೆ ಒಂದರ ಹಿಂದೆ ಒಂದರಂತೆ ದರ ಏರಿಕೆಯ ಬರೆ ಬೀಳುತ್ತಿದ್ದು ಈರುಳ್ಳಿ, ಬೆಳ್ಳುಳ್ಳಿ ಬಳಿಕ ಟೊಮೆಟೊ ದರ ಏರಿಕೆಯಾಗಿದೆ.
ಅಕಾಲಿಕ ಮಳೆಯಿಂದ ಟೊಮೆಟೊ ಇಳುವರಿ ಕುಸಿತಗೊಂಡಿದೆ. ಇದರ ಜೊತೆ ಈಗ ನವರಾತ್ರಿ ಹಬ್ಬ ಆರಂಭಗೊಂಡಿದೆ. ಬೇಡಿಕೆ ಜಾಸ್ತಿ ಇದೆ. ಪೂರೈಕೆ ಕಡಿಮೆ ಇರುವ ಕಾರಣ ಟೊಮೆಟೊ ಬೆಲೆ ದಿಢೀರ್ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.
ಈಗಾಗಲೇ ಅಕಾಲಿಕ ಮಳೆಯಿಂದಾಗಿ 1 ಕೆಜಿ ಈರುಳ್ಳಿ ದರ 70 ರೂ. ದಾಟಿದೆ. 1 ಕೆಜಿ ಬೆಳ್ಳುಳ್ಳಿ ದರ 500 ರೂ. ಆಗಿದೆ. ಈಗ ಟೊಮೆಟೊ ದರ ಏರಿಕೆಯಿಂದಾಗಿ ದಸರಾ ಹಬ್ಬದ ಸಮಯದಲ್ಲಿ ಜನರ ಜೇಬು ಮತ್ತಷ್ಟು ಖಾಲಿಯಾಗಲಿದೆ.