ಬೆಂಗಳೂರು ಕಳೆದ ವಾರವಷ್ಟೇ ಶಿರಾಡಿ ಘಾಟ್ ರಸ್ತೆಯಲ್ಲಿ ಭೂಕುಸಿತ ಸಂಭವಿಸಿ ರಸ್ತೆ ಸಂಚಾರ ಕೆಲವು ದಿನಗಳ ಕಾಲ ಬಂದ್ ಆಗಿತ್ತು. ಅತ್ತ ಸಂಪಾಜೆ ಘಾಟಿಯಲ್ಲಿಯೂ ರಾತ್ರಿ ಸಂಚಾರ ಬಂದ್ ಆಗಿದ್ದರಿಂದ ಬೆಂಗಳೂರು ಮಂಗಳೂರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಈ ವೇಳೆ ವಿಶೇಷ ರೈಲುಗಳನ್ನು ಹೊರಡಿಸಿದ್ದ ರೈಲ್ವೆ ಇಲಾಖೆ ಪ್ರಯಾಣಿಕರ ನೆರವಿಗೆ ಧಾವಿಸಿತ್ತು.
ಇದೀಗ ರೈಲು ಸಂಪರ್ಕವೂ ಕಡಿತಗೊಂಡಿರುವುದರಿಂದ ಪ್ರಯಾಣಿಕರಿಗೆ ಬಸ್ಸೇ ಆಧಾರವಾಗಿದೆ. ಆದರೆ ಬಸ್ ಟಿಕೆಟ್ ದರ ವಿಪರೀತ ಏರಿಕೆಯಾಗಿದೆ
ರೈಲು ಸಂಚಾರ ಸ್ಥಗಿತಗೊಂಡಿರುವುದು ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇಗುಲಗಳಿಗೆ ತೆರಳುವ ಭಕ್ತರ ಸಂಕಷ್ಟಕ್ಕೆ ಕಾರಣವಾಗಿದೆ. ಖಾಸಗಿ ಬಸ್ಗಳು ಬೇಕಾಬಿಟ್ಟಿಯಾಗಿ ಟಿಕೆಟ್ ದರ ನಿಗದಿಪಡಿಸುತ್ತಿದ್ದು, ಪರಿಣಾಮವಾಗಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರು ಕಡೆ ತೆರಳುವ ಬಸ್ ಟಿಕೆಟ್ ದರ ದುಪ್ಪಟ್ಟು ಹಾಗೂ ಅದಕ್ಕಿಂತಲೂ ಹೆಚ್ಚಾಗಿ ಪ್ರಯಾಣಿಕರ ಸ್ಥಿತಿ ಅಯ್ಯೋಮಯವಾಗಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ ಟಿಕೆಟ್ ದರ ದುಪ್ಪಟ್ಟಾಗಿದ್ದು, ಕೆಲವು ಬಸ್ಗಳಂತೂ ಎರಡ್ಮೂರು ಪಟ್ಟು ದರ ಏರಿಕೆ ಮಾಡಿವೆ. ಉಭಯ ನಗರಗಳ ಮಧ್ಯೆ ಬಸ್ ಪ್ರಯಾಣಕ್ಕೆ 500-600 ರೂ. ಇದ್ದ ಟಿಕೆಟ್ ದರ ಈಗ 1000 ರೂ.ನಿಂದ 1,200 ರೂ.ಗೆ ಏರಿಕೆಯಾಗಿದೆ. ಹಾಗೆ ಎಸಿ ಬಸ್ ಟಿಕೆಟ್ ದರ 2000 ರೂ.ನಿಂದ 4000 ರೂ.ಗೆ ಏರಿಕೆಯಾಗಿದೆ. ಪರಿಣಾಮವಾಗಿ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಕಡೆ ಹೊರಟ ಜನರಿಗೆ ತೊಂದರೆಯಾಗಿದೆ.