ಬೆಂಗಳೂರು, ಜೂನ್ 24: ಬರ ಪರಿಸ್ಥಿತಿಯ ಕಾರಣ ಈ ವರ್ಷ ಬೆಂಗಳೂರಿನಲ್ಲಿ ತೀವ್ರವಾದ ನೀರಿನ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಇದೀಗ ಜೂನ್ ತಿಂಗಳಿನಲ್ಲಿ ಮುಂಗಾರು ಮಳೆ ರಾಜ್ಯ ಪ್ರವೇಶಿಸಿದ್ದು, ಬೆಂಗಳೂರು ನಗರವೂ ಸೇರಿದಂತೆ ರಾಜ್ಯದಾದ್ಯಂತ ಅನೇಕ ಕಡೆಗಳಲ್ಲಿ ಮಳೆಯಾಗುತ್ತಿದೆ. ಆದಾಗ್ಯೂ, ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಮಾತ್ರ ಬಗೆಹರಿದಿಲ್ಲ! ಬೆಂಗಳೂರಿನ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದ್ದರೂ, ಬಹಳಷ್ಟು ಪ್ರದೇಶಗಳಲ್ಲಿನ ನಿವಾಸಿಗಳು ಕುಡಿಯಲು ಮತ್ತು ಅಡುಗೆ ಮಾಡಲು ಮತ್ತು ನೀರಿನ ಟ್ಯಾಂಕರ್ಗಳನ್ನು ಅವಲಂಬಿಸಿದ್ದಾರೆ. ದುರದೃಷ್ಟವಶಾತ್, ನಗರದಲ್ಲಿ ನೀರಿನ ಟ್ಯಾಂಕರ್ಗಳು ರಾಜ್ಯ ಸರ್ಕಾರ ನಿಗದಿಪಡಿಸಿದ ಮಿತಿಗಿಂತ ಹೆಚ್ಚಿನ ಬೆಲೆಯನ್ನು ವಿಧಿಸುತ್ತಿವೆ.
ನಗರದ ಹೊರವಲಯದಲ್ಲಿರುವ ಅಪಾರ್ಟ್ಮೆಂಟ್ಗಳಲ್ಲಿ ವಾಸಿಸುವವರು ಹೆಚ್ಚಿನವರು ಬೋರ್ವೆಲ್ಗಳ ನೀರನ್ನು ಅವಲಂಬಿಸಿರುವುದರಿಂದ ನೀರಿನ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಹಲವು ಕಡೆ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವ ಕಾರಣ ಆ ಪ್ರದೇಶದ ನಿವಾಸಿಗಳು ಟ್ಯಾಂಕರ್ಗಳ ಮೇಲೆ ಅವಲಂಬಿತರಾಗಿದ್ದಾರೆ.