ಬೆಂಗಳೂರು: ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು , ಈ ಬಾರಿ ಇಲ್ಲಿ ಡಾ. ಮಂಜುನಾಥ್ ಅವರನ್ನು ಗೆಲ್ಲಿಸಲೇಬೇಕೆಂದು ಪಣ ತೊಟ್ಟಿದ್ದಾರೆ.
ಹೌದು. 2019ರ ಚುನಾವಣೆಯಲ್ಲಿ ಡಿಕೆ ಸುರೇಶ್ ಒಬ್ಬರೇ ಕರ್ನಾಟಕದಿಂದ ಕಾಂಗ್ರೆಸ್ ಸಂಸದರಾಗಿ ಆಯ್ಕೆ ಆಗಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಡೆದ ಪರಿಣಾಮ ಡಿಕೆ ಸುರೇಶ್ 2.06 ಲಕ್ಷ ಮತಗಳಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದರು. ಜೆಡಿಎಸ್ ಮತಗಳು ಸುರೇಶ್ ಅವರಿಗೆ ಬಿದ್ದ ಕಾರಣ ಲೀಡ್ ಹೆಚ್ಚಾಗಿದೆ. ಹೀಗಾಗಿ ಈ ಬಾರಿ ಇವರನ್ನು ಸೋಲಿಸಲೇಬೇಕೆಂದು ಹೆಚ್ಡಿಕೆ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.
ಮಂಜುನಾಥ್ ಅವರ ಚುನಾವಣೆ ಸ್ಪರ್ಧೆಗೆ ಅವರ ಪತ್ನಿ ಅನಸೂಯ ಮತ್ತು ಪುತ್ರ ಅಲ್ಲದೇ ಮಾಜಿ ಪ್ರಧಾನಿ ದೇವೇಗೌಡರ ವಿರೋಧ ಇತ್ತು. ಮಾತುಕತೆಯ ವೇಳೆ ಬಾವನನ್ನು ಗೆಲ್ಲಿಸಿಕೊಂಡು ಬರುವುದು ನನ್ನ ಜವಾಬ್ದಾರಿ ಎಂದು ಹೆಚ್ಡಿಕೆ ಮನವೊಲಿಕೆ ಮಾಡಿದ್ದರು. ಕುಮಾರಸ್ವಾಮಿ ಮಾತಿಗೆ ಒಪ್ಪಿ ಬಿಜೆಪಿಯಿಂದ ಸ್ಪರ್ಧೆಗೆ ಸಹೋದರಿ ಒಪ್ಪಿಗೆ ನೀಡಿದ್ದಾರೆ. ಈಗ ಹೆಚ್ಡಿಕೆ ಕೊಟ್ಟ ಮಾತು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ.