ಮೈಸೂರು: ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ಗೆ ಪಟ್ಟು ಹಿಡಿದಿದ್ದ ಭವಾನಿ ರೇವಣ್ಣ ಅವರು ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಪಡದೇ ತೀರುವ ಹಠಕ್ಕೆ ಬಿದ್ದಿದ್ದ ಎಚ್ಡಿ ರೇವಣ್ಣ ಕುಟುಂಬ ಕೊನೆಗೆ ಕ್ಷೇತ್ರ ಬದಲಿಸಿ ಸ್ಪರ್ಧೆ ಮಾಡುವ ನಿರ್ಧಾರ ಮಾಡಿದೆ ಎನ್ನಲಾಗಿದೆ.
ಮಾಜಿ ಸಚಿವರಾಗಿರುವ ಎಚ್ಡಿ ರೇವಣ್ಣ ತಮ್ಮ ಪತ್ನಿಗೆ ಟಿಕೆಟ್ ನೀಡದಿದ್ದರೆ ನಾನು ಕೂಡ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದರು. ಇನ್ನು ಮಕ್ಕಳಾದ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರೆ ಕುಟುಂಬದಲ್ಲಿ ಹೊಸದಾಗಿ ಎಂಎಲ್ಸಿ ಆಗಿರುವ ಸೂರಜ್ ರೇವಣ್ಣ ಕೂಡ ಅದೇ ದಾರಿ ಹಿಡಿದಿದ್ದರು.
ಆದರೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಎಚ್ಡಿ ಕುಮಾರಸ್ವಾಮಿ ಅವರೂ ಕೂಡ ಪಟ್ಟು ಬಿಡದೇ ಸಾಮನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡುವುದಾಗಿ ಹೇಳಿದ್ದರು. ಅಲ್ಲದೆ ವಿಧಾನಸಭಾ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದರೆ ಗೆಲ್ಲುವುದಿಲ್ಲ. ಹಾಸನ ಕ್ಷೇತ್ರದಲ್ಲಿ ಕಾರ್ಯಕರ್ತರ ತೀರ್ಮಾನವೇ ಅಂತಿಮ. ವಾಸ್ತವಿಕ, ಗ್ರೌಂಡ್ ರಿಯಾಲಿಟಿ ಮೇಲೆ ಟಿಕೆಟ್ ನೀಡುತ್ತೇವೆ. ಒಂದೂವರೆ ವರ್ಷದ ಹಿಂದೆ ಹಾಸನದ ಶಾಸಕರು ಸವಾಲು ಹಾಕಿದ್ದರು. ಹಾಗಾಗಿ ಸಾಮಾನ್ಯ ಕಾರ್ಯಕರ್ತನ ನಿಲ್ಲಿಸಿ ಗೆಲ್ಲುತ್ತೇನೆ ಎಂದಿದ್ದೇನೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಹೀಗಾಗಿ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವ ನಿರ್ಧಾರವನ್ನು ಭವಾನಿ ರೇವಣ್ಣ ಅವರು ಮಾಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಸ್ಪರ್ಧೆ ಮಾಡುವುದು ನಿಶ್ಚಿತ ಆದರೆ ಕ್ಷೇತ್ರ ಬದಲಾವಣೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಒಂದೇ ಜಿಲ್ಲೆಯಲ್ಲಿ ಎಲ್ಲರೂ ಸ್ಪರ್ಧೆ ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದ್ದು, ಹೀಗಾಗಿ ಮೈಸೂರಿನ ಕಡೆ ಮುಖ ಮಾಡಿ ಚಾಮರಾಜ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಇಳಿಯುತ್ತಾರೆ ಎಂದು ಹೇಳಲಾಗುತ್ತಿದೆ.
ಬುಧವಾರದವರೆಗೂ ಹಾಸನ ವಿಧಾನಸಭಾ ಕ್ಷೇತ್ರದಿಂದ ಭವಾನಿ ರೇವಣ್ಣ ಹಾಗೂ ಎಚ್ಪಿ ಸ್ವರೂಪ್ ಇಬ್ಬರೂ ಒಂದೇ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆಂದು ಹೇಳಲಾಗಿತ್ತು. ಮುಂದುವರಿದು ಭವಾನಿ ರೇವಣ್ಣ ಹಾಗೂ ಸ್ವರೂಪ್ ಇಬ್ಬರೂ ಕ್ರಮವಾಗಿ ಏಪ್ರಿಲ್ 14 ಮತ್ತು ಏಪ್ರಿಲ್ 17 ರಂದು ನಾಮಪತ್ರ ಸಲ್ಲಿಸಲಿದ್ದಾರೆಂದು ಕೂಡ ಸುದ್ದಿ ಹರಿದಾಡಿತ್ತು.