ಚಿತ್ರದುರ್ಗ: ಭೋವಿ ಸಮುದಾಯದ ಮುಖಂಡರಿಗೆ ಟಿಕೆಟ್ ನೀಡದ ಹಿನ್ನೆಲೆ ರಾಷ್ಟ್ರೀಯ ಪಕ್ಷಗಳ ವಿರುದ್ಧ ಭೋವಿ ಮಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ (Immadi Siddharameshwara Shri) ಅಸಮಾಧಾನ ಹೊರಹಾಕಿದ್ದಾರೆ.
ಚಿತ್ರದುರ್ಗದ (chitradurga) ಭೋವಿ ಮಠದಲ್ಲಿ (Bovimath) ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅರವಿಂದ ಲಿಂಬಾವಳಿ ಮತ್ತು ಗೂಳಿಹಟ್ಟಿ ಶೇಖರ್ ಅವರನ್ನು ಕಡೆಗಣನೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಅಖಂಡ ಶ್ರೀನಿವಾಸ್ ಅವರು ಹೆಚ್ಚಿನ ಅಂತರದಿಂದ ದಾಖಲೆಯ ಗೆಲುವು ಸಾಧಿಸಿದ್ದರು. ಅವರನ್ನು ಸಹ ಕಡೆಗಣನೆ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ಹಿಂದೆ 8 ರಿಂದ 10 ಭೋವಿ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಿದ್ದರು. ಈ ಬಾರಿ ಎರಡೂ ರಾಷ್ಟ್ರೀಯ ಪಕ್ಷದ ವರಿಷ್ಠರಿಗೆ ಭೋವಿ ಸಮಾಜದ (Bovi community) ಮುಖಂಡರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೆವು. ಆದರೆ ಈ ಬಾರಿ ಸಮುದಾಯವನ್ನು ಎರಡು ರಾಷ್ಟ್ರೀಯ ಪಕ್ಷಗಳು ಕಡೆಗಣಿಸಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅರವಿಂದ ಲಿಂಬಾವಳಿ (Aravind Limbavali), ಗೂಳಿಹಟ್ಟಿ ಶೇಖರ್ (Gulihatti D Shekar) ಅವರಿಗೆ ಬಿಜೆಪಿ ಹಾಗೂ ಅಖಂಡ ಶ್ರೀನಿವಾಸ್ (Akhanda Srinivas) ಅವರಿಗೆ ಕಾಂಗ್ರೆಸ್ ಸಾಮಾಜಿಕ ನ್ಯಾಯದಡಿ ಟಿಕೆಟ್ ನೀಡಬೇಕು ಎಂದು ಸ್ವಾಮೀಜಿ ಆಗ್ರಹಿಸಿದ್ದಾರೆ. ಟಿಕೆಟ್ ನೀಡದಿದ್ದರೆ ಭೋವಿ ಸಮುದಾಯ ಕಡೆಗಣಿಸಿದ ಪಕ್ಷಗಳನ್ನು ಸಮುದಾಯ ಕೈಬಿಡಲಿದೆ ಎಂದು ಎರಡೂ ಪಕ್ಷದ ವರಿಷ್ಠರಿಗೆ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.