ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election 2023) ಯ ಫಲಿತಾಂಶ ಶನಿವಾರ ಹೊರಬೀಳುತ್ತಿದ್ದು, ಇದೀಗ ರಾಜ್ಯದಲ್ಲಿ ಬೆಟ್ಟಿಂಗ್ ದಂಧೆ ಆರಂಭವಾಗಿದೆ. ಅಂತೆಯೇ ವ್ಯಕ್ತಿಯೊಬ್ಬರು ಬೆಟ್ಟಿಂಗ್ಗೆ ತನ್ನ ಜಮೀನನ್ನೇ ಮಾರಾಟ ಮಾಡಲು ಮುಂದಾಗಿರುವ ಪ್ರಸಂಗವೊಂದು ಮೈಸೂರಿನಲ್ಲಿ ನಡೆದಿದೆ.
ಹೌದು. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಗ್ರಾಮದ ಯೋಗೇಶ್ ಗೌಡ (Yogesh Gowda Betting) ಜಮೀನು ಮಾರಲು ಮುಂದಾದ ಕಾಂಗ್ರೆಸ್ (Congress) ಮುಖಂಡ. ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಕೆ.ವೆಂಕಟೇಶ್ (K Venkatesh) ಹಾಗೂ ಜೆಡಿಎಸ್ (JDS) ಅಭ್ಯರ್ಥಿ ಕೆ.ಮಹದೇವ್ ( K Mahadev) ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ.
ಈ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೆಲ್ತಾರೆಂದು 1 ಎಕರೆ 37 ಗುಂಟೆ ಜಮೀನು ಬೆಟ್ಟಿಂಗ್ ನಡೆದಿದೆ. ಸದ್ಯ ಯೋಗೇಶ್ ಗೌಡ ಮಾತನಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೀಡಿಯೋದಲ್ಲಿ ಏನಿದೆ..?: ಪಿರಿಯಾಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೆಲ್ತಾರೆಂದು ಹಾರನಹಳ್ಳಿ ಗ್ರಾಮದ ಯೋಗೇಶ್ ಗೌಡನಾದ ನಾನು 1 ಎಕರೆ 37 ಗುಂಟೆ ಬೆಟ್ ಕಟ್ತೀನಿ. ಯಾರದ್ರೂ ತಯಾರಿದ್ದರೆ ಬರಬಹುದು. ಅಗ್ರಿಮೆಂಟ್ ಮಾಡಿ ಕೊಡ್ತೀನಿ. ನನ್ನ ಹೆಂಡ್ತಿ ಮಕ್ಕಳ ಸಹಿ ಕೂಡ ಹಾಕಿ ಕೊಡುತ್ತೇನೆ ಎಂದು ವೀಡಿಯೋದಲ್ಲಿ ಹೇಳಿದ್ದಾರೆ.