ಹಣ ಪಾವತಿ ಮಾಡಿದವರಿಗೆ ಮಾತ್ರವೇ ಟ್ವಿಟರ್ ನಲ್ಲಿ ಬ್ಲೂಟಿಕ್ ಎಂದು ಹೇಳುವ ಮೂಲಕ ಟ್ವಿಟರ್ ಲೋಕದಲ್ಲಿ ಎಲೋನ್ ಮಸ್ಕ್ ಸಂಚಲನ ಸೃಷ್ಟಿಸಿದ್ದರು. ತಾವು ಹೇಳಿದಂತೆ ಉಚಿತವಾಗಿ ಬ್ಲೂಟಿಕ್ ಪಡೆದವರ ಖಾತೆಯಿಂದ ಅದನ್ನು ತೆಗೆದುಹಾಕಿದ್ದು, ಮಸ್ಕ್ ನಡೆಗೆ ಸಾಕಷ್ಟು ಸಿಲೆಬ್ರಿಟಿಗಳು ಆಕ್ರೋಶ ವ್ಯಕ್ತ ಪಡಿಸಿದ್ದರು. ಹಲವರಂತೂ ತಾವು ಹಣ ಪಡೆದು ಬ್ಲೂ ಟಿಕ್ ಪಡೆದುಕೊಳ್ಳುವುದಿಲ್ಲ ಎಂದು ನೇರವಾಗಿಯೇ ತಿರುಗೇಟು ನೀಡಿದ್ದರು.
ಟ್ವಿಟರ್ ಖಾತೆಯಲ್ಲಿ ಸಾಕಷ್ಟು ಸಕ್ರಿಯವಾಗಿರುವ ಬಿಗ್ ಬಿ ಇತ್ತೀಚೆಗೆ ಹಣ ನೀಡಿ ಬ್ಲೂಟಿಕ್ ಮರಳಿ ಪಡೆದಿದ್ದರು. ಟ್ವಿಟರ್ ಸಂಸ್ಥೆ ತಿಳಿಸಿದಂತೆ ತಿಂಗಳಿಗೆ 900 ರೂಪಾಯಿ ಪಾವತಿಸಿ ಅಮಿತಾಭ್ ಚಂದಾದಾರರಾಗಿದ್ದರು. ಹಣ ನೀಡಿದ್ದರಿಂದ ಅಮಿತಾಭ್ ಅವರ ಟ್ವಿಟರ್ ಖಾತೆಗೆ ಬ್ಲೂಟಿಕ್ ಸಿಕ್ಕಿತ್ತು. ಇದೀಗ ಎಲೋನ್ ಮಸ್ಕ್ ಮತ್ತೊಂದು ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ನಿರ್ಧಾರಕ್ಕೆ ಅಮಿತಾಭ್ ಗರಂ ಆಗಿದ್ದಾರೆ.
ಬ್ಲೂಟಿಕ್ ಪಡೆಯಲು ಹಣ ಪಾವತಿಸಬೇಕು ಎನ್ನುವ ಎಲೋನ್ ನಿರ್ಧಾರವನ್ನು ಸ್ವಾಗತಿಸದೇ ತಮಗೆ ಬ್ಲೂಟಿಕ್ ಬೇಡ ಎಂದು ಸಾಕಷ್ಟು ಸಿಲೆಬ್ರಿಟಿಗಳು ಸುಮ್ಮನಿದ್ದರು. ಬಹುತೇಕರು ಚಂದಾದಾರರಾಗದೇ ಹಾಗೆಯೇ ಉಳಿದುಕೊಂಡರು. ಇದು ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದರಿತ ಎಲೋನ್, ಒಂದು ಮಿಲಿಯನ್ ಹಿಂಬಾಲಕರಿರುವ ಟ್ವಿಟರ್ ಖಾತೆಗೆ ಉಚಿತವಾಗಿ ಬ್ಲೂಟಿಕ್ ನೀಡಿದ್ದಾರೆ. ಈ ನಡೆ ಅಮಿತಾಭ್ ಕೋಪಕ್ಕೆ ಕಾರಣವಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಅಮಿತಾಭ್. ಈಗಾಗಲೇ ನಾನು ಹಣ ಪಾವತಿಸಿ ಬ್ಲೂಟಿಕ್ ಪಡೆದಿದ್ದೇನೆ. ನೀವು ಮತ್ತೊಂದು ನಿರ್ಧಾರ ಪ್ರಕಟಿಸಿದ್ದೀರಿ. 48.4 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ನಾನು ನಿಮ್ಮಿಂದಾಗಿ ಹಣ ಕಳೆದುಕೊಳ್ಳಬೇಕಾಯಿತು. ಈಗ ಏನು ಮಾಡಲಿ? ಎಂದು ಎಲೋನ್ ಮಸ್ಕ್ ಗೆ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಟ್ವಿಟರ್ ಸಂಸ್ಥೆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.