ಬಿಗ್ ಬಾಸ್ ಮನೆಯಲ್ಲಿರುವ ಜಗದೀಶ್ ಪದೇ ಪದೇ ತಮ್ಮ ಹೇಳಿಕೆಗಳ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇತ್ತೀಚೆಗಿನ ಟಾಸ್ಕ್ನಲ್ಲಿ ನಟ ತ್ರಿವಿಕ್ರಮ್ ಅವರಿಗೆ ಪೆಟ್ಟಾಗಿದ್ದರಿಂದ ಅವರನ್ನು ವೈದ್ಯರ ಬಳಿ ಕಳಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ತ್ರಿವಿಕ್ರಮ್ ಮಾಡಿದ್ದೆಲ್ಲ ನಾಟಕ ಎಂದು ಲಾಯರ್ ಜಗದೀಶ್ ಹೇಳಿದ್ದಾರೆ.
ಸ್ವರ್ಗ ವಾಸಿಗಳು ಮತ್ತು ನರಕವಾಸಿಗಳು ಎಂದು ಎರಡು ತಂಡಗಳಾಗಿ ಬಿಗ್ ಬಾಸ್ ಮನೆ ಭಾಗ ಆಗಿದೆ. ಸ್ವರ್ಗದಲ್ಲಿ ಕೆಲವು ಸವಲತ್ತುಗಳು ಇವೆ. ಆದರೆ ನರಕದಲ್ಲಿ ಇರುವವರಿಗೆ ಬೇಸಿಕ್ ಸೌಕರ್ಯಗಳು ಮಾತ್ರ ಇವೆ. ಹಾಗಾಗಿ ನರಕದಲ್ಲಿ ಇರುವವರು ಸ್ವರ್ಗಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. ಟಾಸ್ಕ್ ಆಡುವಾಗ ಸಿಕ್ಕಾಪಟ್ಟೆ ಆಗ್ರೆಸಿವ್ ಆಗಿ ಸ್ಪರ್ಧಿಗಳು ನಡೆದುಕೊಳ್ಳುತ್ತಿದ್ದಾರೆ. ಈ ವೇಳೆ ತ್ರಿವಿಕ್ರಮ್ ಅವರಿಗೆ ಪೆಟ್ಟಾಗಿತ್ತು.
ಲಾಯರ್ ಜಗದೀಶ್ ಅವರು ಸ್ವರ್ಗದಲ್ಲಿ ಇದ್ದಾರೆ. 5ನೇ ದಿನ ಬೆಳ್ಳಂಬೆಳಗ್ಗೆ ನರಕದ ಬಳಿ ಬಂದ ಅವರು ಗೋಲ್ಡ್ ಸುರೇಶ್ ಎದುರು ನಿಂತು ಈ ಮಾತುಗಳನ್ನು ಹೇಳಿದ್ದಾರೆ. ‘ತ್ರಿವಿಕ್ರಮ್ ಆಸ್ಪತ್ರೆಗೆ ಹೋಗಿದ್ದು ನಾಟಕ. ಅವನಿಗೆ ಪೆಟ್ಟಾಗಿದೆ ಎಂಬುದು ನಿಜ. ಆದರೆ ಆಸ್ಪತ್ರೆಗೆ ಹೋಗುವ ಮಟ್ಟಕ್ಕೆ ಏನೂ ಆಗಿಲ್ಲ. ಇದೆಲ್ಲ ಅವನ ನಾಟಕ’ ಎಂದು ಲಾಯರ್ ಜಗದೀಶ್ ಹೇಳಿದ್ದಾರೆ. ಈ ಮಾತು ಕೇಳಿದ ಬಳಿಕ ಏನು ಉತ್ತರ ನೀಡಬೇಕು ಎಂಬುದು ತಿಳಿಯದೇ ಗೋಲ್ಡ್ ಸುರೇಶ್ ಅವರು ನಕ್ಕು ಸುಮ್ಮನಾಗಿದ್ದಾರೆ.
ವಿಚಿತ್ರ ವರ್ತನೆಗಳಿಂದ ಲಾಯರ್ ಜಗದೀಶ್ ಗುರುತಿಸಿಕೊಂಡಿದ್ದಾರೆ. ಕಳೆದ ಸಂಚಿಕೆಯಲ್ಲಿ ಅವರು ಬಿಗ್ ಬಾಸ್ ಶೋ ವಿರುದ್ಧವೇ ತಿರುಗಿ ಬಿದ್ದಿದ್ದರು. ‘ನಾನು ಈ ಕಾರ್ಯವನ್ನು ನಿಲ್ಲಿಸುತ್ತೇನೆ. ಇಲ್ಲಿನ ಮಾಫಿಯಾ ಎಕ್ಸ್ಪೋಸ್ ಮಾಡುತ್ತೇನೆ’ ಎಂದೆಲ್ಲ ಅವರು ಆರ್ಭಟಿಸಿದ್ದರು. ಕೆಲವೇ ಸಮಯದ ಬಳಿಕ ಕ್ಷಮೆ ಕೇಳಿದರು. ಹಾಗಂತ ಅವರು ಆಡಿದ ಮಾತುಗಳನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ. ವೀಕೆಂಡ್ನಲ್ಲಿ ಖಂಡಿತವಾಗಿಯೂ ಈ ಬಗ್ಗೆ ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ.