‘ಬಿಗ್ ಬಾಸ್ ಕನ್ನಡ ಸೀಸನ್ 11’ಕ್ಕೆ ಗ್ರ್ಯಾಂಡ್ ಒಪನಿಂಗ್ ಸಿಕ್ಕಿದೆ. ಪ್ರತಿಭಾರಿಯಂತೆ ಈ ಭಾರಿಯೂ ಸೋಷಿಯಲ್ ಮೀಡಿಯಾದಲ್ಲಿ ಖ್ಯಾತಿ ಘಳಿಸಿದವರನ್ನು ಬಿಗ್ ಬಾಸ್ ಮನೆಗೆ ಕರೆ ತರಲಾಗಿದೆ. ಈ ಭಾರಿ ಧನರಾಜ್ ಆಚಾರ್ ಎಂಟ್ರಿ ಕೊಟ್ಟಿದ್ದಾರೆ. ಹೆಂಡತಿ ಹಾಗೂ ಕುಟುಂಬದ ಜೊತೆ ಅವರು ರೀಲ್ಸ್ ಮಾಡುತ್ತ ಜನರಿಗೆ ಪರಿಚಿತರಾಗಿದ್ದಾರೆ. ಕಾಮಿಡಿ ವಿಡಿಯೋಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಅವರು ಈ ಬಾರಿ ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಎಷ್ಟು ನಗಿಸುತ್ತಾರೆ ಎನ್ನುವ ಕುತೂಹಲ ಮೂಡಿದೆ. ಈ ಮಧ್ಯೆ ಮೊದಲ ದಿನವೇ ಧನರಾಜ್ ವಿರುದ್ಧ ಸುದೀಪ್ ಆಕ್ರೋಶಗೊಂಡಿದ್ದಾರೆ.
‘ನನಗೆ ನಾನೇ ನಾಯಕ…ನಿಮ್ಮನ್ನ ನಗ್ಸೋದೆ ನನ್ನ ಕಾಯಕ. ಕಾಫಿ ಕುಡಿಯೋ ಅಭ್ಯಾಸ ಇಲ್ಲ. ಕಂಟೆಂಟ್ ಕಾಪಿ ಮಾಡೋ ದುರಭ್ಯಾಸನೂ ಇಲ್ಲ. ಒರಿಜಿನಲ್ ಕಂಟೆಂಟ್ ಮಾತ್ರ’ ಎಂದು ಅವರು ತಮ್ಮ ಇನ್ಸ್ಟಾಗ್ರಾಮ್ ಬಯೋದಲ್ಲಿ ಮಾಹಿತಿ ನೀಡಿದ್ದಾರೆ.
‘ಬಿಗ್ ಬಾಸ್’ ಬಗ್ಗೆ ಧನರಾಜ್ ಅವರು ಒಂದು ವಿಡಿಯೋ ಮಾಡಿದ್ದರು. ಜಗಳ ನಡೆಯೋದು ಟಿಆರ್ಪಿಗಾಗಿ ಎಂದು ಅವರು ಹೇಳಿದ್ದರು. ಈ ವಿಡಿಯೋನ ಪ್ಲೇ ಮಾಡಲಾಯಿತು. ಆ ಬಳಿಕ ಸುದೀಪ್ ಗಂಭೀರವಾಗಿ ಕ್ಲಾಸ್ ತೆಗೆದುಕೊಂಡರು. ‘ನಾವು ಹೆಂಗ್ ಕಾಣಿಸ್ತೀವಿ? ನಾನು ತಮಾಷೆ ಮಾಡೋ ಹಾಗೆ ಕಾಣ್ತಾ ಇದೀನಾ? ಜಗಳ ಮಾಡೋದು ಟಿಆರ್ಪಿಗಾ? ನಾನು ನೋಡದನ್ನು ಬದಲಾಯಿಸಿಕೊಳ್ಳೋಕೆ ಆಗಲ್ಲ. ಗೌರವ ಇಲ್ಲದ ವ್ಯಕ್ತಿನ ಏಕೆ ಕಳುಹಿಸುತ್ತಿದ್ದೀರಿ’ ಎಂದು ಸುದೀಪ್ ಪ್ರಶ್ನೆ ಮಾಡಿದರು.
‘ನಾನು ಮಾಡಿರೋದು ತಮಾಷೆಗೆ. ಇದನ್ನು ಗಂಭೀರವಾಗಿ ಸ್ವೀಕರಿಸಬೇಡಿ’ ಎಂದು ಧನರಾಜ್ ಕೇಳಿಕೊಂಡರು. ಆ ಬಳಿಕ ಸುದೀಪ್ ನಕ್ಕರು. ಆಗ ಧನರಾಜ್ ನಿಟ್ಟುಸಿರು ಬಿಟ್ಟರು. ಧನರಾಜ್ಗೆ ಮಗು ಜನಿಸಿ ಇನ್ನೂ ಒಂದು ತಿಂಗಳೂ ಆಗಿಲ್ಲ. ಮಗು ಜನಿಸಿದ ಬಳಿಕ ಅವರಿಗೆ ಬಿಗ್ ಬಾಸ್ನಿಂದ ಆಫರ್ ಬಂದಿತ್ತು. ಹೀಗಾಗಿ, ಇದನ್ನು ಅವರು ಒಪ್ಪಿಕೊಂಡರು. ಧನರಾಜ್ ಯಾವ ರೀತಿ ಪ್ರೇಕ್ಷಕರನ್ನು ರಂಜಿಸುತ್ತಾರೆ ಕಾದು ನೋಡಬೇಕಿದೆ.