ಮುಂಬೈ: 2024ರ ಟಿ20 ವಿಶ್ವಕಪ್ ವಿಜೇತ ಭಾರತ ತಂಡ ಅದ್ಧೂರಿ ವಿಜಯಯಾತ್ರೆ ಮುಗಿಸಿದ ಬೆನ್ನಲ್ಲೇ ಬಿಸಿಸಿಐ ಭರ್ಜರಿ ಉಡುಗೊರೆ ನೀಡಿ ಸನ್ಮಾನಿಸಿದೆ.
ತಾಯ್ನಾಡಿಗೆ ಮರಳಿದ್ದ ಟೀಂ ಇಂಡಿಯಾ ಆಟಗಾರರಿಗೆ ಮುಂಬೈನಲ್ಲಿ ಅದ್ಧೂರಿ ಸ್ವಾಗತ ದೊರೆಯಿತು.
ಮುಂಬೈ ಕಡಲತೀರ ನಾರೀಮನ್ ಪಾಯಿಂಟ್ನಿಂದ ಆರಂಭಗೊಂಡ ಅದ್ಧೂರಿ ಯಾತ್ರೆ ವಾಂಖೆಡೆ ಕ್ರೀಡಾಂಗಣ ತಲುಪಿತು. ಬಳಿಕ ಟೀಂ ಇಂಡಿಯಾ ಆಟಗಾರರು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಿದ ಬಿಸಿಸಿಐ 125 ಕೋಟಿ ರೂ. ಬಹುಮಾನ ಮೊತ್ತದ ಚೆಕ್ ವಿತರಣೆ ಮಾಡಿತು. ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಕಾರ್ಯದರ್ಶಿ ಜಯ್ ಶಾ, ಆಟಗಾರರಿಗೆ ಚೆಕ್ ವಿತರಣೆ ಮಾಡಿದರು. ಇದಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರು ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದರು.
ಮುಂಬೈನಲ್ಲಿ ನಡೆದ ಅದ್ಧೂರಿ ವಿಜಯಯಾತ್ರೆಯಲ್ಲಿ ನಾಯಕ ರೋಹಿತ್ ಶರ್ಮಾ , ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಭರ್ಜರಿ ಕಮಾಲ್ ಮಾಡಿದರು. ವಿಜಯೋತ್ಸವ ಪರೇಡ್ ವೇಳೆ ಆಟಗಾರರ ಮಧ್ಯೆ ನಿಂತು ಸಂಭ್ರಮದ ಕಡಲಲ್ಲಿ ತೇಲುತ್ತಿದ್ದ ರೋಹಿತ್ ಶರ್ಮಾರ ಹೆಗಲ ಮೇಲೆ ಕೈಹಾಕಿಕೊಂಡು ಕೊಹ್ಲಿ ಬಸ್ ಮುಂಭಾಗಕ್ಕೆ ಕರೆತಂದರು. ಬಳಿಕ ಇಬ್ಬರೂ ಟ್ರೋಫಿ ಎತ್ತಿ ಹಿಡಿದು ಜೋರಾಗಿ ಘರ್ಜಿಸಿದರು. ಈ ದೃಶ್ಯದ ವೀಡಿಯೋ ತುಣುಕು ಕೆಲವೇ ಕ್ಷಣಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತು.