ಪ್ಯಾರಿಸ್: ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ರೂಪಿಸಲು ಬೃಹತ್ ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆಯ ಬ್ಯಾಸ್ಟಿಲ್ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಭಾರತ-ಫ್ರಾನ್ಸ್ ದ್ವಿಪಕ್ಷೀಯ ಬಾಂಧವ್ಯಕ್ಕೆ 25 ವರ್ಷ ತುಂಬುತ್ತಿದೆ. ಈ ಸಂದರ್ಭದಲ್ಲಿ ಪ್ಯಾರಿಸ್ಗೆ ಭೇಟಿ ನೀಡಿರುವುದು ಹೆಮ್ಮೆ ಎನಿಸುತ್ತಿದೆ ಎಂದರು.
ವಿಶ್ವದಾದ್ಯಂತ 30ಕ್ಕೂ ಹೆಚ್ಚು ದೇಶಗಳು ಭಾರತದ ಜತೆ ಬಾಂಧವ್ಯ ಹೊಂದಿವೆ. ಆದರೆ, ಫ್ರಾನ್ಸ್ ಜತೆಗಿನ ಸಂಬಂಧಕ್ಕೆ ವಿಶಿಷ್ಟ ಸ್ಥಾನಮಾನವಿದೆ ಎಂದು ಹೇಳಿದರು. ಉಭಯ ದೇಶಗಳ ರಕ್ಷಣಾ ಒಪ್ಪಂದವು ಭಾರತ- ಫ್ರಾನ್ಸ್ ಸಂಬಂಧದ ಬುನಾದಿ ಎಂದು ಬಣ್ಣಿಸಿರುವ ಮೋದಿ, ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತದಲ್ಲಿ ಫ್ರಾನ್ಸ್ ಮಹತ್ವದ ಪಾಲುದಾರನಾಗಿದೆ ಎಂದರು.
ಭಾರತ-ಫ್ರಾನ್ಸ್ ಬಾಂಧವ್ಯದ 25ನೇ ವರ್ಷಾಚರಣೆ ಸಂದರ್ಭದಲ್ಲಿ ಟ್ವೀಟ್ ಮಾಡಿದ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್, ಉಭಯ ದೇಶಗಳ ನಡುವಿನ ಸಂಬಂಧ ವಿಶ್ವಾಸಾರ್ಹ ಮತ್ತು ಸ್ನೇಹದ ಆಚರಣೆ ಎಂದು ಕರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೃದಯಪೂರ್ವಕ ಸ್ವಾಗತ ಕೋರಿ, ಅವರನ್ನು ಅಪ್ಪಿಕೊಂಡಿರುವ ಹೃದಯಸ್ಪರ್ಶಿ ಫೋಟೋ ಹಂಚಿಕೊಂಡಿದ್ದಾರೆ.