ತೆಲುಗು ಚಿತ್ರರಂಗದ ಖ್ಯಾತ ನಟ ನಾಗಾರ್ಜುನಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ನಾಗಾರ್ಜುನ ಒಡೆತನದ ಎನ್ ಕನ್ವೆನ್ಷನ್ ಸೆಂಟರ್ ಕೆಡವದಂತೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಹೈದರಾಬಾದ್ನ ಮದಾಪುರದಲ್ಲಿರುವ ಎನ್ ಕನ್ವೆನ್ಷನ್ ಸೆಂಟರ್ ಕೆಲ ಭಾಗಗಳನ್ನು ಆ.24ರಂದು ಹೈಡ್ರಾ ಅಧಿಕಾರಿಗಳು ಧ್ವಂಸಗೊಳಿಸಿದ್ದಾರೆ. ವಿವಾದ ಕೋರ್ಟ್ನಲ್ಲಿದ್ರೂ ನೋಟಿಸ್ ನೀಡದೇ ತೆರವು ಮಾಡಲಾಗಿದೆ ಎಂದು ನಾಗಾರ್ಜುನ ಮತ್ತೆ ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ್ದು, ತಾತ್ಕಾಲಿಕ ರಿಲೀಫ್ ನೀಡಲಾಗಿದೆ.
ನಾಗಾರ್ಜುನ ಅವರಿಗೆ ಸೇರಿದ ‘ಎನ್ ಕನ್ವೆಂಷನ್ ಹಾಲ್’ 10 ಎಕರೆ ಜಾಗದಲ್ಲಿ ಇತ್ತು. ಈ ಕಟ್ಟಡ ನಿರ್ಮಾಣದ ವೇಳೆ ಹಲವು ನಿಯಮಗಳ ಉಲ್ಲಂಘನೆ ಮಾಡಲಾಗಿದೆ ಎಂಬುದು ಸಾಬೀತಾಗಿದೆ. ಮಾದಾಪುರದ ತಮ್ಮಿಡಿಕುಂಟ ಕೆರೆಯ 1.12 ಎಕರೆ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಉಳಿದ ಎರಡು ಎಕರೆ ಕೆರೆ ಬಫರ್ಜೋನ್ನಲ್ಲಿ ಬರುತ್ತದೆ ಎನ್ನಲಾಗಿದೆ.
‘ಪಟ್ಟಾ ಭೂಮಿಯಲ್ಲೇ ಎನ್ ಕನ್ವೆನ್ಷಲ್ ಹಾಲ್ ನಿರ್ಮಾಣ ಮಾಡಿದ್ದೆವು. ಕೆರೆಯ ಒಂದು ಇಂಚು ಭೂಮಿ ಕೂಡ ನಾವು ಆಕ್ರಮಿಸಿಲ್ಲ. ಈ ಹಿಂದೆಯೂ ನೆಲಸಮ ಮಾಡಲು ನೋಟಿಸ್ ನೀಡಲಾಗಿತ್ತು, ನಾವು ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದೆವು. ಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಕಟ್ಟಡ ನೆಲಸಮ ಮಾಡಿದ್ದಾರೆ’ ಎಂದು ನಾಗಾರ್ಜುನ ಅವರು ಟ್ವೀಟ್ ಮಾಡಿದ್ದಾರೆ.
‘ಒತ್ತುವರಿ ಆಗಿದ್ದರೆ ನಾನೇ ಮುಂದೆ ನಿಂತು ತೆರವು ಮಾಡಿಸುತ್ತಿದ್ದೆ. ಯಾವುದೇ ಮಾಹಿತಿ ನೀಡದೆ ಕಟ್ಟಡ ನೆಲಸಮ ಮಾಡಿದ್ದಾರೆ. ಇದರಿಂದ ನಮ್ಮ ಬಗ್ಗೆ ತಪ್ಪು ಸಂದೇಶ ಹೋಗುವಂತೆ ಆಗಿದೆ. ಅಧಿಕಾರಿಗಳ ಈ ಅಕ್ರಮದ ವಿರುದ್ಧ ನ್ಯಾಯಾಲಯದ ಮೊರೆ ಹೋಗುತ್ತೇವೆ. ಅಲ್ಲಿ ನಮಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇದೆ’ ಎಂದು ನಾಗಾರ್ಜುನ್ ಹೇಳಿದ್ದರು.