ಚೆನ್ನೈ: ಸಾರ್ವತ್ರಿಕ ಚುನಾವಣೆ ಸನಿಹದಲ್ಲಿ ತಮಿಳುನಾಡಿನಲ್ಲಿ ಬಿಜೆಪಿಗೆ (BJP) ಬಿಗ್ ಶಾಕ್ ತಗುಲಿದೆ. ಎನ್ಡಿಎ ಮೈತ್ರಿಕೂಟದಿಂದ ಅಣ್ಣಾಡಿಎಂಕೆ (AIADMK) ಹೊರಬಂದಿದೆ.
ಚೆನ್ನೈನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಡಿಎಂಕೆಯಿಂದ ಹೊರ ಬರಲು ಸರ್ವಾನುಮತದ ತೀರ್ಮಾನ ತೆಗೆದುಕೊಂಡಿದೆ. ಈ ಬೆನ್ನಲ್ಲೇ ಅಣ್ಣಾಡಿಎಂಕೆ ಕಾರ್ಯಕರ್ತರು ಸಂಭ್ರಮ ಮಾಡ್ಕೊಂಡಿದ್ದಾರೆ. ಆದರೆ ಅತ್ತ ಪ್ರಧಾನಿ ಮೋದಿ ಆಡಳಿತವನ್ನು ಮೆಚ್ಚಿರುವ ಒಡಿಶಾ ಸಿಎಂ ನವೀನ್ ಪಟ್ನಾಯಕ್ (Naveen Patnaik) 10ಕ್ಕೆ ಎಂಟು ಅಂಕ ನೀಡಿದ್ದಾರೆ. ಮಹಿಳಾ ಮೀಸಲಾತಿ ಮಸೂದೆಯನ್ನು ಮೆಚ್ಚಿದ್ದಾರೆ. ಒಂದು ದೇಶ-ಒಂದು ಚುನಾವಣೆಯ ಪರವಾಗಿಯೂ ನವೀನ್ ಪಟ್ನಾಯಕ್ ಬ್ಯಾಟ್ ಬೀಸಿದ್ದಾರೆ.
ಪಟ್ನಾಯಕ್ ಹೇಳಿಕೆಗಳನ್ನು ಗಮನಿಸಿದಲ್ಲಿ ಅವರು, ಎನ್ಡಿಎಗೆ ಹತ್ತಿರವಾಗ್ತಿದ್ದಾರೆ ಎಂಬ ವ್ಯಾಖ್ಯಾನಗಳು ಕೇಳಿಬಂದಿವೆ. ಈ ನಡುವೆ ಐಎನ್ಡಿಐಎ ಕೂಟದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಪದೇ ಪದೇ ಗೊತ್ತಾಗ್ತಿದೆ. ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೇಲೆ ಲೋಕಸಭೆ ವಿಪಕ್ಷ ನಾಯಕ ಅಧಿರ್ ರಂಜನ್ ಚೌಧರಿ ವಾಗ್ದಾಳಿ ನಡೆಸಿದ್ದಾರೆ. ಮಮತಾ ಬ್ಯಾನರ್ಜಿಯ ಸ್ಪೇನ್ ಪ್ರವಾಸದ ಖರ್ಚುವೆಚ್ಚದ ಮಾಹಿತಿ ನೀಡುವಂತೆ ಸವಾಲ್ ಹಾಕಿದ್ದಾರೆ.
ದೋಸ್ತಿ ಖತಂಗೆ ಕಾರಣವೇನು?: ಜಯಲಲಿತಾ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಅಣ್ಣಾಮಲೈ ಮಾತನಾಡಿದ್ದರು. ಪಕ್ಷದ ಸಂಸ್ಥಾಪಕ ಅಣ್ಣಾದುರೈ ಬಗ್ಗೆ ಅಣ್ಣಾಮಲೈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಣ್ಣಾಮಲೈ ಬಗ್ಗೆ ದೂರು ಕೊಟ್ಟರೂ ಹೈಕಮಾಂಡ್ ಸ್ಪಂದಿಸಲಿಲ್ಲ ಎಂಬ ಕೋಪವೂ ಇದೆ.
ಪೆರಿಯಾರ್ವಾದದ ವಿರುದ್ಧ ಬಿಜೆಪಿಗರ ನಿರಂತರ ವಾಗ್ದಾಳಿ ನಡೆಸಿತ್ತು. ಬಿಜೆಪಿ ಜೊತೆ ಕೈಜೋಡಿಸಿದ್ದರಿಂದಲೇ ಕಳೆದ ಬಾರಿ ಸೋಲು ಎಂಬ ಅಭಿಪ್ರಾಯಕ್ಕೆ ಅಣ್ಣಾಡಿಎಂಕೆ ಬಂದಿದ್ದು, ಸೀಟು ಹಂಚಿಕೆ ಸಂಬಂಧ ಬಿಜೆಪಿ ಜೊತೆ ಒಮ್ಮತದ ಸಹಮತ ಮೂಡದ ಪರಿಣಾಮ ಬಿಜೆಪಿಗೆ ಶಾಕ್ ನೀಡಿದೆ.