ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮುಡಾ ಪ್ರಕರಣದಲ್ಲಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕ್ರಮ ಪ್ರಶ್ನಿಸಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ತೀರ್ಪು ಪ್ರಕಟಿಸಲಿದೆ.
ಈ ವಿಚಾರದಲ್ಲಿ ಕೋರ್ಟ್ ನೀಡುವ ತೀರ್ಪಿನತ್ತ ಎಲ್ಲರ ಚಿತ್ತ ನೆಟ್ಟಿದೆ. ಒಂದೊಮ್ಮೆ ತೀರ್ಪು ಸಿಎಂ ಸಿದ್ದರಾಮಯ್ಯ ಪರವಾಗಿ ಬಂದರೆ ಅವರ ಕುರ್ಚಿ ಸೇಫ್ ಆಗಲಿದೆ. ಇಲ್ಲದಿದ್ದರೆ ಸಿದ್ದರಾಮಯ್ಯ ರಾಜಕೀಯವಾಗಿ ಸಂಕಷ್ಟಕ್ಕೆ ಈಡಾಗಬಹುದು ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.
ಯಾವುದಕ್ಕೂ ಇರಲಿ ಎಂದು ತೀರ್ಪು ಬಂದ ಕೂಡಲೇ ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ. ರಾಜ್ಯದ ಬೆಳವಣಿಗೆಗಳ ಮೇಲೆ ಎಐಸಿಸಿ ತೀವ್ರ ನಿಗಾ ಇರಿಸಿದೆ.
ಹೈಕೋರ್ಟ್ ತೀರ್ಪು ಬಳಿಕ ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ನಿರೀಕ್ಷೆಯಲ್ಲಿ ಬಿಜೆಪಿ ಜೆಡಿಎಸ್ ಪಕ್ಷಗಳಿವೆ. ಮುಂದಿನ ಲೆಕ್ಕಾಚಾರಗಳನ್ನು ಹಾಕಿಕೊಂಡೇ ದೋಸ್ತಿಗಳು ಮುಂದೇನು ಮಾಡಬೇಕೆಂದು ರಣತಂತ್ರ ರೂಪಿಸಿವೆ.
ಕೋರ್ಟ್ ತೀರ್ಪು ಸಿದ್ದರಾಮಯ್ಯಗೆ ವ್ಯತಿರಿಕ್ತವಾಗಿ ಬಂದರೆ ಮತ್ತೊಂದು ಹಂತದ ಹೋರಾಟ ಪ್ಲಾನ್ ಮಾಡಿಕೊಂಡಿವೆ. ನಿರಂತರ ಹೋರಾಟ ಮೂಲಕ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಡ ಸೃಷ್ಟಿಸುವ ಗುರಿಯನ್ನು ಹೊಂದಿದೆ. ತೀರ್ಪಿನ ಸ್ವರೂಪ, ಗಂಭೀರತೆ ನೋಡಿಕೊಂಡು ಮುಂದುವರೆಯಲು ದೋಸ್ತಿ ನಾಯಕರು ನಿರ್ಧರಿಸಿದ್ದಾರೆ.