ಬೆಂಗಳೂರು: ಸಿಲಿಕಾನ್ ಸಿಟಿಯ ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಐಟಿ ಸಂಸ್ಥೆಗಳು ಉದ್ಯೋಗಿಗಳಿಗೆ ಶಾಕ್ ನೀಡಿದೆ. ಕರ್ನಾಟಕದ ಐಟಿ ಸಂಸ್ಥೆಗಳು ಉದ್ಯೋಗಿಗಳ ಕೆಲಸದ ಸಮಯವನ್ನು 14 ಗಂಟೆಗಳವರೆಗೆ ವಿಸ್ತರಿಸಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿವೆ ಎಂದು ಮೂಲಗಳು ತಿಳಿಸಿವೆ.
ಈ ಹೊಸ ಪ್ರಸ್ತಾವನೆಯು ಉದ್ಯೋಗಿಗಳಿಂದ ತೀವ್ರ ವಿರೋಧವನ್ನು ಎದುರಿಸಿದೆ.
ಮೂಲಗಳ ಪ್ರಕಾರ 1961ರ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಯನ್ವಯ ರಾಜ್ಯ ಸರ್ಕಾರವು ತಿದ್ದುಪಡಿಯನ್ನು ಜಾರಿಗೊಳಿಸಲು ಮುಂದಾಗಿದೆ. ಈ ತಿದ್ದುಪಡಿಯಲ್ಲಿ ಐಟಿ ಕಂಪನಿಗಳು ದಿನಕ್ಕೆ 14 ಗಂಟೆ ಕಾರ್ಯನಿರ್ವಹಿಸುವ(12 ಗಂಟೆ ಕೆಲಸ ಹಾಗೂ 2 ಗಂಟೆ ಹೆಚ್ಚುವರಿ ಕೆಲಸ) ಪ್ರಸ್ತಾಪವನ್ನು ಸೇರಿಸಲು ಉದ್ದೇಶಿಸಿದೆ. ಪ್ರಸ್ತುತ ಕಾರ್ಮಿಕ ಕಾನೂನಿನ ಅನ್ವಯ ಹೆಚ್ಚುವರಿ ಒಂದು ಗಂಟೆ ಒಳಗೊಂಡು 9 ಗಂಟೆಗಳ ಕಾಲ ಕೆಲಸ ನಿರ್ವಹಿಸಲು ಅನುಮತಿಸಲಾಗಿದೆ.
ಐಟಿ ವಲಯದ ನೂತನ ಪ್ರಸ್ತಾಪವು, “ಐಟಿ/ಐಟಿಇಎಸ್/ಬಿಪಿಒ ವಲಯಗಳಲ್ಲಿ ದಿನಕ್ಕೆ 12 ಗಂಟೆಗಳಿಗೂ ಹೆಚ್ಚು ಸಮಯ ಹಾಗೂ ನಿರಂತರ ಮೂರು ನಿರಂತರ ತಿಂಗಳುಗಳಲ್ಲಿ 125 ಗಂಟೆಗಳು ಮೀರಬಾರದು” ಎಂದು ತಿಳಿಸಲಾಗಿದೆ. ಐಟಿ ಕಂಪನಿಗಳ ಪ್ರಸ್ತಾಪದ ಬಗ್ಗೆ ರಾಜ್ಯ ಸರ್ಕಾರ ಚರ್ಚಿಸಿ ಶೀಘ್ರದಲ್ಲೆ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಈ ಪ್ರಸ್ತಾಪವು ಸಂಪುಟದಲ್ಲಿ ಚರ್ಚೆಯಾಗುವ ಸಂಭವವಿದೆ. ರಾಜ್ಯ ಐಟಿ ಕಂಪನಿಗಳ 14 ಗಂಟೆ ಕೆಲಸದ ಪ್ರಸ್ತಾಪಕ್ಕೆ ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ಉದ್ಯೋಗಿಗಳ ಸಂಘ(ಕೆಐಟಿಯು) ಭಾರಿ ವಿರೋಧ ವ್ಯಕ್ತಪಡಿಸಿದೆ.
ಈ ತಿದ್ದುಪಡಿಯು ಪ್ರಸ್ತುತ ಮೂರು ಪಾಳಿಗಳಲ್ಲಿರುವ ಪದ್ಧತಿಯ ಬದಲಿಗೆ ಎರಡು ಪದ್ಧತಿಯನ್ನು ಅನುಮತಿಸುವುದಾಗಿದೆ. ಇದರಿಂದ ಮೂರನೇ ಒಂದು ಭಾಗದಷ್ಟು ಕಾರ್ಮಿಕರನ್ನು ವಜಾಗೊಳಿಸುವ ಹುನ್ನಾರವಾಗಿದೆ ಎಂದು ಕೆಐಟಿಯು ತಿಳಿಸಿದೆ. ರಾಜ್ಯದಲ್ಲಿ ಈಗಾಗಲೇ ದಿನಕ್ಕೆ ಐಟಿ ಉದ್ಯೋಗಿಗಳು 10 ಗಂಟೆ ಕೆಲಸ ಮಾಡುತ್ತಾರೆ. ನಿಯಮಗಳೂ ಇದೇ ರೀತಿ ಇವೆ. ಇದನ್ನು 14 ಗಂಟೆಗೆ ಏರಿಕೆ ಮಾಡಿದರೆ ಸುಮಾರು 20 ಲಕ್ಷ ಉದ್ಯೋಗಿಗಳ ಜೀವನದ ಮೇಲೆ ಪರಿಣಾಮ ಬೀರಲಿದೆ” ಎಂಬುದಾಗಿ ಸಂಘಟನೆ ಸದಸ್ಯರು ಸಚಿವರಿಗೆ ಮನವರಿಕೆ ಮಾಡಿದ್ದಾರೆ.