ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಯ ಸುತ್ತ ಹಲವು ಅನುಮಾನ ಹುಟ್ಟಿಕೊಂಡಿದೆ. ಸಾಲ ಮಾಡಿಕೊಂಡು ಸತ್ತಿರಬಹುದು ಅನ್ನೋದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹೊರಬಂದಿದೆ. ಆದ್ರೆ ಗುರುಪ್ರಸಾದ್ ಸಾಲ ಮಾಡಿದ್ರೂ ಹೆದರುವವರಲ್ಲ ಅಂತ ಪತ್ನಿ ಹೇಳಿದ್ದು ಪ್ರಕರಣಕ್ಕೆ ಟ್ವಿಸ್ಟ್ ನೀಡಿದೆ. ತನಿಖೆ ಚುರುಕಾಗಿದ್ದು ಗುರುಪ್ರಸಾದ್ ಬಳಸ್ತಿದ್ದ ಮೊಬೈಲ್, ಟ್ಯಾಬ್ ವಶಕ್ಕೆ ಪಡೆದು ಎಫ್ಎಸ್ಎಲ್ಗೆ ಕಳುಹಿಸಲಾಗಿದೆ.
ಗಾಂಧಿನಗರದ ಖ್ಯಾತ ನಿರ್ದೇಶಕ, ಸಾಕಷ್ಟು ನಟರ ಭವಿಷ್ಯ ಬೆಳಗಿಸಿದ ಪ್ರತಿಭಾವಂತನ ಸಾವು ದುರಂತವಾಗಿದೆ. ಕೊಳೆತು ನಾರುತ್ತಿದ್ದ ಸ್ಥಿತಿಯಲ್ಲಿ ಗುರುಪ್ರಸಾದ್ ಮೃತದೇಹ ಪತ್ತೆಯಾಗಿದೆ. ಇವರ ಸಾವಿನ ಸುತ್ತ ಅನುಮಾನಗಳು ಹುತ್ತ ಹುಟ್ಟಿಕೊಂಡಿದ್ದು ಪೊಲೀಸರಿಗೆ ಕೆಲವೊಂದು ಇಂಟ್ರೆಸ್ಟಿಂಗ್ ಅಂಶಗಳು ಲಭ್ಯವಾಗಿದೆ.
ನಟ, ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಮಾದನಾಯಕಹಳ್ಳಿ ಠಾಣೆ ಪೊಲೀಸರು ಗುರುಪ್ರಸಾದ್ ಸಾವಿನ ನಿಗೂಢತೆಯನ್ನು ಭೇದಿಸುವ ಪ್ರಯತ್ನದಲ್ಲಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಕೂಡ ಪೊಲೀಸರ ಕೈಸೇರಿದೆ, ಗುರುಪ್ರಸಾದ್ ದೇಹದಲ್ಲಿ ಯಾವುದೇ ವಿಷಕಾರಿ ಅಂಶ ಪತ್ತೆಯಾಗಿಲ್ಲ, ಆದ್ರೆ ಉಸಿರುಗಟ್ಟಿ ಸಾವಾಗಿದೆ ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ ಹೀಗಾಗಿ ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣ ಮತ್ತಷ್ಟು ಟ್ವಿಸ್ಟ್ ಪಡೆದಿದೆ.
ಅಕ್ಟೋಬರ್ 29ರ ರಾತ್ರಿ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದರು ಅಂತ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಅಂದು ಕಂಠಪೂರ್ತಿ ಕುಡಿದು ಬಳಿಕ ನೇಣಿಗೆ ಕೊರಳೊಡ್ಡಿದ್ದರು ಎನ್ನಲಾಗಿದೆ. ಇನ್ನು ಗುರುಪ್ರಸಾದ್ ಆತ್ಮಹತ್ಯೆಗೆ ಮುನ್ನ ಮಾಡಿದ್ದ ಪ್ಲಾನ್ ಬಯಲಾಗಿದೆ. ಆತ್ಮಹತ್ಯೆಗೂ ಮುನ್ನ ಹೊಸ ಹಗ್ಗ, ಪರದೆಗಳ ಖರೀದಿ ಮಾಡಿದ್ದು ಮನೆಯ ಡೋರ್, ಕಿಟಕಿ ಲಾಕ್ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಕಿಟಕಿ ಕರ್ಟನ್ ಮೇಲೆ ಪರದೆ ಕಟ್ಟಿದ್ದರಿಂದ ವಾಸನೆ ಬಂದಿಲ್ಲ, 6 ದಿನಗಳ ಬಳಿಕ ವಾಸನೆ ಬಂದಿದ್ದು ಆತ್ಮಹತ್ಯೆ ವಿಚಾರ ಬಯಲಾಗಿದೆ. ಇನ್ನು ಗುರುಪ್ರಸಾದ್ ಮನೆಯಲ್ಲಿ ಹುಡುಕಾಡಿದ ಪೊಲೀಸರಿಗೆ ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ.
ಇನ್ನು ಗುರುಪ್ರಸಾದ್ ಕಳೆದ ಆರು ತಿಂಗಳಿಂದ ಎರಡನೇ ಪತ್ನಿ ಬಿಟ್ಟು ಒಂಟಿಯಾಗಿದ್ದರು ಎನ್ನಲಾಗಿದೆ. 4 ಮೊಬೈಲ್ಗಳನ್ನು ಬಳಸುತ್ತಿದ್ದ ಗುರುಪ್ರಸಾದ್ ಎಲ್ಲವನ್ನೂ ಫ್ಲೈಟ್ ಮೂಡ್ನಲ್ಲಿ ಇಡ್ತಾ ಇದ್ರು ಎನ್ನಲಾಗಿದೆ. ಮೊಬೈಲ್ ಆನ್ ಮಾಡಿದ್ರೆ ಸಾಲಗಾರರ ಕರೆಗಳು ನಿರಂತರವಾಗಿ ಬರ್ತಾ ಇದ್ವು, ಹೀಗಾಗಿ ಮನೆಯ ವೈಫೈ ಬಳಕೆ ಮಾಡಿಕೊಂಡು ವಾಟ್ಸಾಪ್ ಕಾಲ್ ಮಾಡ್ತಿದ್ರು ಎನ್ನಲಾಗಿದೆ, ಸದ್ಯ ಗುರುಪ್ರಸಾದ್ ಬಳಸ್ತಿದ್ದ ಫೋನ್, ಟ್ಯಾಬ್ಗಳನ್ನು ಎಫ್ಎಸ್ಎಲ್ಗೆ ಕಳುಹಿಸಿಲಾಗಿದೆ. ಇನ್ನು ಗುರುಪ್ರಸಾದ್ 3 ಕೋಟಿಗೂ ಅಧಿಕ ಸಾಲ ಮಾಡಿಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಸದ್ಯ ಮಾದನಾಯಕಹಳ್ಳಿ ಪೊಲೀಸರು ಗುರುಪ್ರಸಾದ್ ಸಾವಿನ ಸುತ್ತ ವಿಚಾರಣೆ ನಡೆಸುತ್ತಿದ್ದಾರೆ.