ಬಿಗ್ ಬಾಸ್ ಸೀಸನ್ 11ಕ್ಕೆ ಸ್ಪರ್ಧಿಯಾಗಿ ವಕೀಲ ಜಗದೀಶ್ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಮನೆಗೆ ಕಾಲಿಟ್ಟ ದಿನದಿಂದಲೂ ತಮ್ಮ ಅಗ್ರೆಸೀವ್ ಹೇಳಿಕೆಗಳ ಮೂಲಕವೇ ಸದ್ದು ಮಾಡ್ತಿರುವ ಜಗದೀಶ್ ಇದೀಗ್ ವಕೀಲನೇ ಅಲ್ಲ ಅನ್ನೋದು ಗೊತ್ತಾಗಿದೆ. ಈತ ಮಾಡಿರುವ ವಂಚನೆ ಪ್ರಕರಣ ಇದೀಗ ಬಯಲಾಗಿದೆ.
ಬಿಗ್ ಬಾಸ್ ಮನೆಯಲ್ಲಿರುವ ಕೆಎನ್ ಜಗದೀಶ್ ಕುಮಾರ್ ತಾವು ಎಲ್ಲ ಕಡೆಗಳಲ್ಲಿ ವಕೀಲ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ, ಅವರ ಪರವಾನಿಗೆಯನ್ನು ದೆಹಲಿ ಬಾರ್ ಕೌನ್ಸಿಲ್ ರದ್ದು ಮಾಡಿರೋ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಹೌದು, ಮೇ 7ರಂದು ಜಗದೀಶ್ ಅವರ ಪರವಾನಿಗೆಯನ್ನು ದೆಹಲಿ ಬಾರ್ ಕೌನ್ಸಿಲ್ ರದ್ದು ಮಾಡಿದೆ. ಇದಕ್ಕೆ ಅವರು ಮಾಡಿದ ವಂಚನೆಯೇ ಕಾರಣ ಎನ್ನಲಾಗುತ್ತಿದೆ.
ಜಗದೀಶ್ ಕುಮಾರ್ ಅವರ 12ನೇ ತರಗತಿಯ ಮಾರ್ಕ್ಸ್ ಕಾರ್ಡ್ ನಕಲಿ ಅನ್ನೋದು ದೃಢಪಟ್ಟಿದೆ. ಈ ಕಾರಣದಿಂದ ಅವರ ಡಿಗ್ರೀ ಹಾಗೂ ಎಲ್ಎಲ್ಬಿ ಪ್ರಮಾಣಪತ್ರವನ್ನು ಅಮಾನ್ಯಗೊಳಿಸಲಾಗಿದೆ. ಹಿಮಾಂಶು ಭಾಟಿ ಎಂಬುವವರು ಜಗದೀಶ್ ವಿರುದ್ಧ ದೂರು ನೀಡಿದ್ದರು. ಅವರ ದೂರನ್ನು ಆಧರಿಸಿ ತನಿಖೆ ನಡೆಸಿದಾಗ ಅಸಲಿ ವಿಚಾರ ಹೊರ ಬಿದ್ದಿತ್ತು.
ದೆಹಲಿ ಬಾರ್ ಕೌನ್ಸಿಲ್ ಆದೇಶದ ಪ್ರಕಾರ ಜಗದೀಶ್ ಕುಮಾರ್ ಅವರು ಯಾವುದೇ ಕೋರ್ಟ್ನಲ್ಲಿ ವಾದ ಮಂಡಿಸುವಂತಿಲ್ಲ. ಅವರು ವಕೀಲರೇ ಅಲ್ಲ. ಈಗ ಹೆಸರಿಗಷ್ಟೇ ತಾವು ವಕೀಲರು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಅಷ್ಟೇ.
ಜಗದೀಶ್ ಅವರು ಬಿಗ್ ಬಾಸ್ ಮನೆಯಲ್ಲಿ ಡಾಮಿನೇಟ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಕಾರಣದಿಂದ ಅವರು ಎಲ್ಲರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ. ಅವರು ಒಮ್ಮೆ ಹೊರಕ್ಕೆ ಹೋಗುವ ನಿರ್ಧಾರಕ್ಕೂ ಬಂದಿದ್ದರು. ನಂತರ ಮನಸ್ಥಿತಿ ಬದಲಿಸಿಕೊಂಡಿದ್ದಾರೆ. ಈ ವಾರಾಂತ್ಯದಲ್ಲಿ ಸುದೀಪ್ ಅವರಿಂದ ಜಗದೀಶ್ ಬೈಸಿಕೊಳ್ಳಲಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.