ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11ರ ವಾರದ ಪಂಚಾಯಿತಿಯ ಎಪಿಸೋಡ್ ಸಖತ್ ಇಂಟ್ರೆಸ್ಟಿಂಗ್ ಆಗಿತ್ತು. ಮನೆಯಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಭಾರಿ ಜಗಳ, ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗಿರುವುದು, ಸ್ಪರ್ಧಿಗಳು ವರ್ತಿಸಿದ ರೀತಿ, ಮಾತನಾಡಿದ ರೀತಿ ಹಲವು ವಿಷಯಗಳಿಗೆ ಸುದೀಪ್ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ಕೂತಿದ್ದ ಅಭಿಮಾನಿಗಳು ಕಿಚ್ಚನ ಡಿಸಿಷನ್ ಗೆ ಹ್ಯಾಟ್ಸ್ ಆಫ್ ಹೇಳಿದ್ದಾರೆ.
ಎಂದಿನಂತೆ ಸ್ಟೈಲ್ ಆಗಿ ಬಿಗ್ ಬಾಸ್ ವೇದಿಕೆಗೆ ಎಂಟ್ರಿ ಕೊಟ್ಟ ಸುದೀಪ್ ಸ್ಪರ್ಧಿಗಳ ಜೊತೆ ಸಣ್ಣದಾಗಿ ಉಭಯ ಕುಶಲೋಪರಿ ನಡೆಸಿದರು. ಆ ನಂತರ ಬಿಗ್ಬಾಸ್ ಮನೆಯೊಳಗೆ ಒಂದು ಕೇಕ್ ಒಂದನ್ನು ಕಳಿಸಿದರು.
ಕೇಕ್ ಮೇಲೆ ಅಭಿನಂದನೆಗಳು ಎಂದು ಬರೆಯಲಾಗಿದ್ದು ಕೇಕ್ ನೋಡಿ ಸ್ಪರ್ಧಿಗಳೆಲ್ಲ ಬಹಳ ಖುಷಿಯಾದರು. ವಿಷಯ ಗೊತ್ತಿಲ್ಲದ ಸ್ಪರ್ಧಿಗಳು ಖುಷಿಯಿಂದ ಕೇಕ್ ತಿಂದರು. ಕೇಕ್ ಕಳಿಸಿದ ಜನರಿಗೆ ಥ್ಯಾಂಕ್ಸ್ ಎಂದು ಖುಷಿಯಿಂದ ಹೇಳಿದರು. ಕೇಕ್ ಕತ್ತರಿಸುವಾಗ ಹಾಡುಗಳನ್ನು ಸಹ ಹಾಡಿದರು. ಕೆಲವು ಸ್ಪರ್ಧಿಗಳು ಪರಸ್ಪರರಿಗೆ ಕೇಕ್ ತಿನ್ನಿಸಿ ಖುಷಿ ಪಟ್ಟರು. ಕೇಕ್ ತಿಂದಿದ್ದು ಮುಗಿದ ಬಳಿಕ ಸುದೀಪ್ ಹೇಳಿದ ವಿಷಯ ಕೇಳಿ ಪ್ರತಿಯೊಬ್ಬರು ಶಾಕ್ ಆದರು.
ಪ್ರತಿ ಬಾರಿ ಮಾಧ್ಯಮದವರು, ನಿಮ್ಮ ಪಾಲಿಗೆ ಕೆಟ್ಟ ಸೀಸನ್ ಯಾವುದಾಗಿತ್ತು? ಎಂದು ಕೇಳಿದಾಗಲೆಲ್ಲ ನಾನು ಸೀಸನ್ 6 ಅಥವಾ ಬ್ಯಾಚ್ ನಂಬರ್ 6 ಎಂದು ಹೇಳುತ್ತಿದ್ದೆ. ಆದರೆ ನೀವು ಅದನ್ನು ರೀಪ್ಲೇಸ್ ಮಾಡಿದ್ದೀರಿ. ಕೆಟ್ಟ ಬ್ಯಾಚ್ ಯಾವುದಾಗಿತ್ತು ಎಂದು ಕೇಳಿದಾಗ ಸೀಸನ್ 6 ಎನ್ನುವ ಬದಲಿಗೆ ಇನ್ನು ಮುಂದೆ ಸೀಸನ್ 11 ಎನ್ನಬಹುದು. ನನ್ನ ಅಭಿಪ್ರಾಯವನ್ನು ಬದಲಾವಣೆ ಮಾಡಿದ್ದಕ್ಕೆ ನಿಮಗೆ ಅಭಿನಂದನೆ ಎಂದು ನಾನೇ ಕೇಕ್ ಕಳಿಸಿದ್ದೆ’ ಎಂದರು. ಸುದೀಪ್ ಮಾತು ಕೇಳಿ ಖುಷಿಯಾಗಿ ಕೇಕ್ ತಿಂದಿದ್ದ ಸ್ಪರ್ಧಿಗಳೆಲ್ಲರೂ ಪೆಚ್ಚಾದರು.
ಕಾರ್ಯಕ್ರ ಆರಂಭವಾಗಿ ಕೆಲವೇ ದಿನಗಳಲ್ಲಿ ಅತ್ಯಂತ ಕೆಟ್ಟ ಸೀಸನ್ ಇದು ಎಂಬ ಅಭಿಪ್ರಾಯ ಬಂದಿದೆ. ಮನೆಯಲ್ಲಿ ಬರೀ ಗಲಾಟೆಗಳೇ ನಡೆಯುತ್ತಿವೆ. ಫನ್ ಎನ್ನುವುದೇ ಇಲ್ಲದಂತಾಗಿದೆ. ಆಟ ಆಡಿ ಗೆಲ್ಲೋಣ ಎನ್ನುವುದಕ್ಕಿಂತಲೂ ಜಗಳ ಆಡಿಯೇ ಬಿಗ್ಬಾಸ್ ಗೆಲ್ಲಬೇಕು ಎಂದು ನಿರ್ಧಾರ ಮಾಡಿಕೊಂಡು ಬಂದವರಂತೆ ಸ್ಪರ್ಧಿಗಳು ಪರಸ್ಪರ ಕಿತ್ತಾಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ನಿಯಮ ಮುರಿಯುತ್ತಾರೆ. ಅತ್ಯಂತ ಕೆಟ್ಟ ಪದಗಳನ್ನು ಬಳಸುವುದು, ಸುಮ್ಮ-ಸುಮ್ಮನೆ ಕಿತ್ತಾಡುವುದು ಬಿಗ್ಬಾಸ್ ಮನೆಯಲ್ಲಿ ಇದೇ ನಡೆಯುತ್ತಿದೆ. ಹಾಗಾಗಿಯೇ ಸುದೀಪ್ ಇದನ್ನು ಅತ್ಯಂತ ಕೆಟ್ಟ ಬ್ಯಾಚ್ ಎಂದು ಹೇಳಿದ್ದಾರೆ.