ಬಿಗ್ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಆಗಿ ಹನುಮಂತ ಟ್ರೋಪಿ ಎತ್ತಿ ಹಿಡಿದಿದ್ದಾರೆ. ಬಿಗ್ ಬಾಸ್ ವಿಜೇತರಾದ ಹನುಮಂತ ಅವರಿಗೆ 50 ಲಕ್ಷ ರೂ. ನಗದು ಬಹುಮಾನ ಸಿಕ್ಕಿದೆ. 50 ಲಕ್ಷ ರೂ. ಬಹುಮಾನ ಸಿಕ್ಕಿದರೂ ಅವರಿಗೆ ಪೂರ್ಣ ಪ್ರಮಾಣದ ಹಣ ಕೈ ಸೇರುವುದಿಲ್ಲ. ಹಾಗಾದರೆ ಹನುಮಂತ ಕೈ ಸೇರೋ ಹಣ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ.
ಹನುಮಂತ ಗೆದ್ದಿರೋ ನಗದು ಬಹುಮಾನ ಮೊತ್ತಕ್ಕೆ 30% ಗಿಫ್ಟ್ ಟ್ಯಾಕ್ಸ್ ವಿಧಿಸಲಾಗುತ್ತದೆ. ಹೀಗಾಗಿ ಸಿಗುವ ಬಹುಮಾನದಲ್ಲಿ 30% ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ಈ ಹಣವನ್ನು ಸಂಸ್ಥೆಯವರು ಕಡಿತ ಮಾಡಿಯೇ ಬಿಗ್ ಬಾಸ್ ವಿಜೇತರಿಗೆ ನೀಡುತ್ತಾರೆ.
1961ರ ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ, ಗೇಮ್ ಶೋಗಳು, ಲಾಟರಿಗಳು ಮತ್ತು ಅಂತಹುದೇ ಚಟುವಟಿಕೆಗಳಿಂದ ಗೆದ್ದ ಹಣವನ್ನು ಇತರ ಮೂಲಗಳಿಂದ ಬಂದ ಆದಾಯ ಎಂದು ವರ್ಗೀಕರಿಸಲಾಗಿದೆ.
ಕಾಯ್ದೆಯ ಸೆಕ್ಷನ್ 194B ಪ್ರಕಾರ ಈ ಗೆಲುವಿನ ಮೇಲೆ 30% ರಷ್ಟು ಮೂಲದಲ್ಲಿ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ. ವಿಜೇತರು 1% ರಷ್ಟು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಸೆಸ್ ಅನ್ನು ಸಹ ಪಾವತಿಸಬೇಕಾಗುತ್ತದೆ. ಇದರಿಂದ ಒಟ್ಟು ತೆರಿಗೆ ದರ 31.2% ಏರಿಕೆಯಾಗುತ್ತದೆ. ಇದರ ಜೊತೆ ಬಹುಮಾನದ ಹಣವು 10 ಲಕ್ಷ ರೂ.ಗಿಂತ ಹೆಚ್ಚಿದ್ದರೆ ಹೆಚ್ಚುವರಿಯಾಗಿ 10% ಶುಲ್ಕ ಅನ್ವಯಿಸಲಾಗುತ್ತದೆ.
ಈ ಮೊದಲು ಬೇರೆ ಬೇರೆ ಬಿಗ್ ಬಾಸ್ ಶೋ ವಿಜೇತರಿಗೆ ನಗದು ಬಹುಮಾನ ಮೌಲ್ಯ 50 ಲಕ್ಷ ರೂ., 1 ಕೋಟಿ ರೂ. ಇರುತ್ತಿತ್ತು. ಆದರೆ ಈಗ ಎಲ್ಲಾ ಬಿಗ್ ಬಾಸ್ ಶೋ ವಿಜೇತರಿಗೆ 50 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತದೆ.
ಹನುಮಂತ ಅವರಿಗೆ ತೆರಿಗೆ, ಸೆಸ್ ಎಲ್ಲಾ ಕಡಿತಗೊಂಡು 34,40,000 ರೂ. ಸಿಗಬಹುದು. ಬಹುಮಾನದಲ್ಲಿ 15,60,000 ರೂ. ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಹೋಗುತ್ತದೆ. ಹೀಗಾಗಿ ಹನುಮಂತನ ಕೈ ಸೇರೋ ಮೊತ್ತ 34,40,000 ರೂ.